ಬೈಂದೂರು ಕ್ಷೇತ್ರದ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯದ ಬಾಧಿತ ಗ್ರಾಮಗಳ ಪ್ರಮುಖರ ಸಭೆಯಲ್ಲಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿದರು. ಪ್ರಮುಖರಾದ ಟಿ.ಬಾಲಚಂದ್ರಶೆಟ್ಟಿ, ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಡಾ.ಅತುಲ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
ಕುಂದಾಪುರ: ಕಸ್ತೂರಿ ರಂಗನ್ ವರದಿ ಬಾಧಿತ ಪ್ರದೇಶಗಳ ಜನರ ಸಮಸ್ಯೆ ಕುರಿತು ಗಮನ ಸೆಳೆಯಲು ಈ ಬಾರಿ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು. ಬೈಂದೂರು ಫೌಂಡೇಶನ್ ಮೂಲಕ ಈಗಾಗಲೇ ಕೇರಳದ ಪರಿಣಿತ ತಂಡದ ವರದಿ ತರಿಸಿ ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ಆಸಕ್ತರಿಗೆ ನೀಡಲಾಗುವುದು. ಸತ್ಯಶೋಧನಾ ಭೌತಿಕ ಸರ್ವೇಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಚಿತ್ತೂರಿನಲ್ಲಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮತ್ತು ಬೈಂದೂರು ಫೌಂಡೇಶನ್ ವತಿಯಿಂದ ಬುಧವಾರ ಬೈಂದೂರು ಕ್ಷೇತ್ರದ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯದ ಬಾಧಿತ ಗ್ರಾಮಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಸಮೀಕ್ಷೆ ಮಾಡದಿದ್ದರೆ ನಮ್ಮ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಅರಣ್ಯ ಇಲಾಖಾ ಅಧಿಕಾರಿಗಳನ್ನು ಸೇರಿಸಿಕೊಂಡು ಸರ್ವೇ ಮಾಡಲಾಗುವುದು. ಅದರಿಂದ ವಾಸ್ತವ ಚಿತ್ರಣ ತಿಳಿದು ಬರಲಿದೆ ಎಂದರು.
ವಕೀಲ ಟಿ.ಬಾಲಚಂದ್ರ ಶೆಟ್ಟಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಉದಯ ಜಿ.ಪೂಜಾರಿ, ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಸಬ್ಲಾಡಿ ನಾರಾಯಣ ಶೆಟ್ಟಿ, ನಿವೃತ್ತ ಕೃಷಿ ಅಧಿಕಾರಿ ರಘುರಾಮ ಶೆಟ್ಟಿ ಚಿತ್ತೂರು, ಗ್ರಾಪಂ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಚಿತ್ತೂರು, ಸುದರ್ಶನ ಶೆಟ್ಟಿ ಕೆರಾಡಿ, ಸುಬ್ಬಣ್ಣ ಶೆಟ್ಟಿ ಆಲೂರು, ಅಮೀನ್ ಶೆಟ್ಟಿ ಇಡೂರು, ಪ್ರಾಣೇಶ್ ಯಡಿಯಾಳ ಹಳ್ಳಿಹೊಳೆ, ರಾಘವೇಂದ್ರ ಕೊಠಾರಿ ಕೆರಾಡಿ ಉಪಸ್ಥಿತರಿದ್ದರು.
ಕೆರಾಡಿ, ಕೊಲ್ಲೂರು, ವಂಡ್ಸೆ, ಚಿತ್ತೂರು, ಇಡೂರು ಕುಂಜ್ಞಾಡಿ, ಆಲೂರು, ಗೋಳಿಹೊಳೆ, ಯಡಮೊಗೆ, ಹೊಸಂಗಡಿ, ಆಜ್ರಿ, ಹಳ್ಳಿಹೊಳೆ, ಮಚ್ಚಟ್ಟು ಗ್ರಾಮಗಳ ಪ್ರಮುಖರು ಭಾಗವಹಿಸಿದ್ದರು.
ಪರಿಸರ ಸೂಕ್ಷ್ಮ ಪ್ರದೇಶಕ್ಕಿಂತಲೂ ವಲಯ ಇನ್ನೂ ಕಠಿಣ ನಿಯಮ ಹೊಂದಿದ್ದು ಅದರಿಂದ ಜನ ಜೀವನ ಸಂಕಷ್ಟಕ್ಕೆ ಒಳಗಾಗಲಿದೆ. ಪ್ರತಿಯೊಂದಕ್ಕೂ ಅನುಮತಿ ತೆಗೆದುಕೊಳ್ಳಬೇಕಾಗುವುದರಿಂದ ನಾಗರಿಕರಿಗೆ ಓಡಾಟವೇ ಕಷ್ಟವಾಗಲಿದೆ.