ಹೆಜಮಾಡಿ ನಾರಾಯಣಗುರು ರಸ್ತೆ ಅಭಿವೃದ್ಧಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು. ಪ್ರಮುಖರಾದ ಶೇಖರ ಹೆಜಮಾಡಿ, ಮೋಹನದಾಸ್, ರೇಷ್ಮಾ, ಪಾಂಡುರಂಗ ಕರ್ಕೇರ, ಶರಣ್ ಕುಮಾರ್, ಪ್ರಾಣೇಶ್, ಪವಿತ್ರಾ ಗಿರೀಶ್ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಸಾಗರಮಾಲಾ ಯೋಜನೆ ಮೂಲಕವೂ ಕೇಂದ್ರ ಸರ್ಕಾರದ ಅನುದಾನ ದೊರಕಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಹೆಜಮಾಡಿ ಶ್ರೀ ನಾರಾಯಣ ಗುರು ರಸ್ತೆ ಅಭಿವೃದ್ಧಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ನಾರಯಣ ಗುರು ರಸ್ತೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ 350 ಮೀಟರ್ ವ್ಯಾಪ್ತಿಗೆ ಅಭಿವೃದ್ಧಿಪಡಿಸಲಾಗುವುದು. ಮಿಕ್ಕುಳಿದ 70 ಮೀಟರ್ ರಸ್ತೆಯನ್ನು ಸಾರ್ವಜನಿಕರ ಒತ್ತಾಸೆಗಳಿಗಾಗಿ ಮುಂಗಡ ಕಾಮಗಾರಿಯಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
ಕಾಪು ಕ್ಷೇತ್ರಕ್ಕೆ ಮೂರು ವರ್ಷಗಳಲ್ಲಿ ಕೇವಲ 38 ಕೋಟಿ ರೂ.ಗಳಷ್ಟೇ ಸರ್ಕಾರದ ಅನುದಾನ ಮಂಜೂರಾಗಿದೆ. ಸದ್ಯ 16 ಕೋಟಿ ರೂ.ಗಳನ್ನು ಕಾಪು ಕ್ಷೇತ್ರದ ವಿವಿಧ ಗ್ರಾಪಂಗಳ ರಸ್ತೆ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದು ಹಂತ, ಹಂತವಾಗಿ ಆದ್ಯತೆ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಉಡುಪಿ ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಶೇಖರ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಹೆಜಮಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ರೇಶ್ಮಾ ಮೆಂಡನ್, ಪಾಂಡುರಂಗ ಕರ್ಕೇರ, ಪ್ರಾಣೇಶ್ ಹೆಜಮಾಡಿ, ಪವಿತ್ರಾ ಗಿರೀಶ್, ಶರಣ್ ಕುಮಾರ್ ಮಟ್ಟು, ಸುಭಾಸ್ ಸಾಲ್ಯಾನ್, ಮೋಹನ್ ಸುವರ್ಣ, ರಾಜು ಹೆಜಮಾಡಿ, ಶಿವರಾಮ ಶೆಟ್ಟಿ, ಗೋವರ್ಧನ್ ಕೋಟ್ಯಾನ್, ರವಿ ಕುಂದರ್, ಬಬಿತಾ ಪುತ್ರನ್, ಲಿಲೇಶ್ ಸುವರ್ಣ, ಆಟೋ ಯೂನಿಯನ್ ಪದಾಧಿಕಾರಿ ಚಂದ್ರಕಾಂತ್, ಕೋಡ್ದಬ್ಬು ದೈವಸ್ಥಾನ ಅರ್ಚಕ ಜಗನ್ನಾಥ ಮುಖಾರಿ ಉಪಸ್ಥಿತರಿದ್ದರು.
ಜನವರಿಯಲ್ಲಿ ಬಂದರು ಲೋಕಾರ್ಪಣೆ
ಹೆಜಮಾಡಿ ಕ್ರೀಡಾಂಗಣವನ್ನು ಬಳಸಿಕೊಳ್ಳಲು ಈಗಿರುವ 5,900 ರೂ. ದಿನವಹಿ ಪಾವತಿಯನ್ನು ಸ್ಥಳೀಯರಿಗಾಗಿ ಸಡಿಲಿಸುವಂತೆ ಶಾಸಕರ ಗಮನ ಸೆಳೆದಾಗ, ಈ ಕುರಿತಾಗಿ ಕ್ರೀಡಾ ಸಚಿವರಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಬಹು ನಿರೀಕ್ಷೆಯ ಹೆಜಮಾಡಿ ಸರ್ವಋತು ಬಂದರು ಮುಂದಿನ ಜನವರಿ ವೇಳೆಗೆ ಲೋಕಾರ್ಪಣೆಗೊಳ್ಳಲಿರುವುದಾಗಿ ಶಾಸಕರು ಪುನರುಚ್ಚರಿಸಿದರು.