ಹದಗೆಟ್ಟಿರುವ ಕೊಂಬಾರು ಕಟ್ಟೆ ರಸ್ತೆ.
ಕಡಬ: ತಾಲೂಕಿನ ಕೊಂಬಾರು ಗ್ರಾಮದ ಕಟ್ಟೆ ಎಂಬಲ್ಲಿ ವಾಸಿಸುವ 50 ಮನೆಯವರಿಗೆ ಸರ್ವ ಋತು ಸಂಪರ್ಕ ರಸ್ತೆ ಇಲ್ಲದೆ ಸಮಸ್ಯೆಯಾಗುತ್ತಿರುವ ಕುರಿತು ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ಗುರುವಾರ ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್ ನ್ಯಾಯಪೀಠ, ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿ ಅಕ್ಟೋಬರ್ 1ರೊಳಗೆ ರಸ್ತೆ ಬೇಡಿಕೆ ಬಗ್ಗೆ ಸರ್ಕಾರ ಕೈಗೊಂಡ ಎಲ್ಲ ಕ್ರಮದ ವಿವರವಾದ ವರದಿ ನೀಡುವಂತೆ ಆದೇಶಿಸಿತು. ರಿಟ್ ಅರ್ಜಿ ವಿಚಾರಣೆಯನ್ನು ಅ.1ಕ್ಕೆ ಮುಂದೂಡಿತು.
ಸರ್ವ ಋತು ಸಂಪರ್ಕ ರಸ್ತೆ ಇಲ್ಲದೆ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರಾದ ಹರೀಶ್ ಕೆ. ಹಾಗೂ ನವೀನ್ ಕೆ. ಎಂಬುವರು ಹೈಕೋಟ್‌ಗೆ ರ್ ಹಿರಿಯ ವಕೀಲ ಕೆ.ಎನ್.ಪ್ರವೀಣ ಕುಮಾರ್ ಮೂಲಕ ಹೊಸ ರಿಟ್ ಅರ್ಜಿ ಸಲ್ಲಿಸಿದ್ದರು.
ಕಟ್ಟೆ ಕಂತೋಡಿ ನಿವಾಸಿ ಹರೀಶ್ ಅವರು, ರಸ್ತೆ ಸಮಸ್ಯೆಯಿಂದ ಹಲವಾರು ಜೀವಗಳು ಸಕಾಲದಲ್ಲಿ ಆಸ್ಪತ್ರೆ ತಲುಪದೆ ಮೃತಪಟ್ಟಿರುವುದು, ಕಾಡಾನೆ ಹಾವಳಿ, ಗರ್ಭಿಣಿಯರಿಗೆ ಎದುರಾಗುವ ಸಮಸ್ಯೆ, ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ದಿನನಿತ್ಯದ ಜಂಜಾಟಗಳನ್ನೆಲ್ಲ ವಿವರಿಸಿ ಜಿಪಂ, ಜಿಲ್ಲಾಧಿಕಾರ, ಸರ್ಕಾರಕ್ಕೆ 2024ರಲ್ಲಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಗಲಿಲ್ಲ. ಕೊನೆಗೆ ರಸ್ತೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಈ ರಸ್ತೆ ನಿರ್ಮಾಣವಾದರೆ ಈ ಗ್ರಾಮದಲ್ಲಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟದ ಮೂಲಕ ಸಾಕಾರಗೊಂಡ ಮೂರನೆಯ ದೊಡ್ಡ ಕಾಮಗಾರಿ ಇದಾಗಲಿದೆ.
ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ
ಕಡಬ: ಬಿಳಿನೆಲೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮಾನಹಾನಿ ಮಾಡುವ ಉದ್ದೇಶದಿಂದ ನಿರಂತರವಾಗಿ ಕಿರುಕುಳ ನೀಡುತ್ತಿರುವ ಆರೋಪದಡಿ ಮೂವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಮುಂದಿನ ಆದೇಶದವರೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶಿಸಿದೆ.
ಸುಮಾರು 11 ತಿಂಗಳಿನಿಂದ ನೆಟ್ಟಣ ವಾರ್ಡ್ ನಿವಾಸಿಗಳಾದ ಪ್ರಸಾದ್ ಕೆ.ಜಿ., ಜೂಲಿಯಾನ ಹಾಗೂ ರೈಲ್ವೆ ನಿಲ್ದಾಣ ಸಮೀಪದ ಸಜಿತ್ ಕುಮಾರ್ ವಿವಿಧ ವಿಚಾರ ಮುಂದಿಟ್ಟುಕೊಂಡು ಪದೇಪದೆ ದೂರುಗಳು, ಮಾಹಿತಿ ಹಕ್ಕು ಅರ್ಜಿ, ವಾಟ್ಸಾೃಪ್ ಸಂದೇಶ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ಗುರಿಯಾಗಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪಿಡಿಒ ಚಂದ್ರಾವತಿ ದೂರು ನೀಡಿದ್ದರು. ಈ ಮೂವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ತಡೆ ನೀಡುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಪ್ರಕರಣ ಪುತ್ತೂರಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆವರೆಗೆ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.