ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ. ಆಕಾಶ್ ಜೈನ್ ಮಾತನಾಡಿದರು.
ಉಡುಪಿ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆೆಗೆ ಕರ್ನಾಟಕ ರಾಜ್ಯದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆ ಸ್ಥಾನಮಾನ ನೀಡಬೇಕು ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ. ಆಕಾಶ್ ಜೈನ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶವಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುವರಿ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಿರುವ ಉದಾಹರಣೆಗಳಿವೆ. ಹೀಗಾಗಿ ಕರ್ನಾಟಕದಲ್ಲೂ ತುಳುವಿಗೆ ಈ ಸ್ಥಾನಮಾನ ಕಲ್ಪಿಸಬಹುದು ಎಂದರು.
1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ತುಳುವಿಗೂ ಪ್ರತ್ಯೇಕ ಪ್ರಾಂತ್ಯ ರಚಿಸುವ ಅವಕಾಶವಿತ್ತು. ಆದರೆ ಅಂದಿನ ನಾಯಕರು ತುಳುವರ ಮನವೊಲಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಾಂತ್ಯದ ಬೇಡಿಕೆ ಮುಂದೂಡಲಾಗಿತ್ತು. ಸ್ವಾತಂತ್ರ್ಯದ 80ನೇ ವರ್ಷಕ್ಕೆ ಕಾಲಿಡುತ್ತಿದ್ದರೂ ತುಳು ಭಾಷೆಗೆ ಇದುವರೆಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ವಿಷಾದಿಸಿದರು.
ತುಳುವನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡರೆ ಭಾಷೆಯ ಸಂರಕ್ಷಣೆ, ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾದ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರ್ ಮಾತನಾಡಿ, ತುಳು ಭಾಷೆಯನ್ನು ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಮಾತನಾಡುತ್ತಿದ್ದಾರೆ. ತುಳುವಿಗೆ ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡುವಂತೆ ಎಲ್ಲರೂ ಒಗ್ಗಟ್ಟಿನಿಂದ ಒತ್ತಾಯಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜೈ ತುಳುನಾಡು ಒಡಿಪು ಘಟಕದ ಅಧ್ಯಕ್ಷ ಸಂತೋಷ್ ಎನ್.ಎಸ್. ಕಟಪಾಡಿ, ಉಡುಪಿ ಸಿರಿ ತುಲು ಚಾವಡಿ ಕಾರ್ಯದರ್ಶಿ ಈಶ್ವರ್ ಶೆಟ್ಟಿ, ಕೋಶಾಧಿಕಾರಿ ಅಂಬಿಕಾ ರಾವ್ ಮೊದಲಾದವರು ಉಪಸ್ಥಿತರಿದ್ದರು.