ಮೋರಿ ಕಾಮಗಾರಿ ಸ್ಥಳದಲ್ಲಿ ಸಿಲುಕಿಕೊಂಡ ರಿಕ್ಷಾ. 
ಉಡುಪಿ

ಮೋರಿ ಅಳವಡಿಕೆ ಕಾಮಗಾರಿ ವಿಳಂಬ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ಪಡುಪಣಂಬೂರು, ತೋಕೂರು, ಎಸ್ ಕೋಡಿ ಸಂಪರ್ಕ ರಸ್ತೆಯ ಕಲ್ಲಾಪು ಮಾಗಂದಡಿ ಬಳಿ ಪಡುಪಣಂಬೂರು ಗ್ರಾಪಂ ವತಿಯಿಂದ ಮೋರಿ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವಿಳಂಬಗೊಂಡಿರುವುದರಿಂದ ಮಳೆ ಬಂದು ಕೆಸರು ತುಂಬಿಕೊಂಡು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಕಲ್ಲಾಪು ಮಾಗಂದಡಿ ಬಳಿ ಹಲವಾರು ವರ್ಷಗಳಿಂದ ಮಳೆ ನೀರು ಸರಿಯಾಗಿ ಹರಿದು ಹೋಗದೆ ಕೃತಕ ನೆರೆ ಉಂಟಾಗಿ ಕೃಷಿ ಹಾನಿ ಸಂಭವಿಸುತ್ತಿದೆ. ಸ್ಥಳೀಯ ಕೃಷಿಕರ ಬೇಡಿಕೆಗೆ ಮಣಿದು ಪಂಚಾಯಿತಿ ಈ ಭಾಗದಲ್ಲಿರುವ ಹಳೇ ಮೋರಿ ತೆಗೆದು ಹೊಸ ಮೋರಿ ಅಳವಡಿಕೆ ಕಾಮಗಾರಿಗೆ ಗುತ್ತಿಗೆದಾರರಿಗೆ ನೀಡಲಾಗಿತ್ತು. ಗುತ್ತಿಗೆದಾರರ ವಿಳಂಬ ಕಾಮಗಾರಿಯಿಂದ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ಹೊಂಡ ಬಿದ್ದು ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಟಿಪ್ಪರ್, ಆಟೋ ರಸ್ತೆ ನಡುವಿನ ಹೊಂಡಕ್ಕೆ ಬಿದ್ದು ಸಿಲುಕಿಕೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕೂಡಲೇ ಸ್ಥಳೀಯರು ವಾಹನವನ್ನು ಮೇಲಕ್ಕೆತ್ತಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.

ಮಳೆಗಾಲದ ನೆರೆ ಸಂದರ್ಭ ನೀರು ಸರಾಗವಾಗಿ ಹರಿಯಲು ದೊಡ್ಡ ಮೋರಿಯ ಅಗತ್ಯವಿದೆ. ಗ್ರಾಮಸ್ಥರ ಆಗ್ರಹದ ಮೇರೆಗೆ ಪಂಚಾಯಿತಿ ವತಿಯಿಂದ ಕಾಮಗಾರಿ ಆರಂಭಗೊಂಡಿದ್ದರೂ ಬೇಸಿಗೆಯಲ್ಲಿ ಪೂರ್ಣಗೊಳಿಸದ ಪರಿಣಾಮ ಸಮಸ್ಯೆಯಾಗಿದೆ. ಮೋರಿ ಪೈಪ್ ಮೇಲೆ ಹಾಕಿದ ಮಣ್ಣು ಹಸಿಯಾಗಿದ್ದು, ವಾಹನಗಳು ಸಿಲುಕಿಕೊಳ್ಳುತ್ತಿದೆ. ಮಳೆಗೆ ಭಾರಿ ವಾಹನ ಸಂಚಾರ ಸಂದರ್ಭ ಮೋರಿ ಪೈಪು ಒಡೆಯುವ ಸಾಧ್ಯತೆಗಳಿವೆ.

— ವಿಜಯ್ ಕುಮಾರ್ ರೈ ಸ್ಥಳೀಯ ಕೃಷಿಕ