ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಉಡುಪಿ: ಕೆಲವು ಅತಿರೇಕದ ಬುದ್ಧೀಜಿವಿಗಳಿಗೆ ಯಾರನ್ನಾದರೂ ಟೀಕೆ ಮಾಡಿ ತಾವೇ ದೊಡ್ಡವರೆಂದು ತೋರಿಸಿಕೊಳ್ಳುವ ಹವ್ಯಾಸವಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದನ್ನೇ ಕೆಲವರು ತಮ್ಮ ಖಾಯಂ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ದೇಶವೇ ಮೊದಲು ಎಂಬ ತತ್ವದಡಿ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಇಂತಹ ಸಣ್ಣಪುಟ್ಟ ಅಡೆತಡೆಗಳನ್ನು ಹಾಗೂ ದೇಶವಿರೋಧಿ ಕೃತ್ಯಗಳನ್ನು ಎದುರಿಸುವ ಶಕ್ತಿ ನಮ್ಮ ದೇಶ ಮತ್ತು ಪ್ರಧಾನಿಗಿದೆ. ಸಂಸತ್ತಿನಲ್ಲಿ ಚರ್ಚೆ ನಡೆಸಲು ಮುಕ್ತ ಅವಕಾಶಗಳಿವೆ. ಅದನ್ನು ಬಿಟ್ಟು ಹೊರಗೆ ಧರಣಿ ಕುಳಿತುಕೊಳ್ಳುವವರಿಗೆ ದೇಶದ ಜನತೆ ಹೆಚ್ಚಿನ ಮಾನ್ಯತೆ ನೀಡುವುದಿಲ್ಲ ಎಂದರು.
ಆಗುಂಬೆ ಘಾಟಿಯ ರಸ್ತೆ ಅಭಿವೃದ್ಧಿಗೆ ಡಿಪಿಆರ್
ಆಗುಂಬೆ ಘಾಟಿಯ ರಸ್ತೆ ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದ್ದು, ಈ ಹಿಂದೆ ಕರೆದಿದ್ದ ಟೆಂಡರ್ಗೆ ಯಾರೂ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ, ತಾಂತ್ರಿಕ ಅಂಶಗಳನ್ನು ಮರುಪರಿಶೀಲಿಸಿ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ. ಈ ಬಾರಿ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವಾಗ ಪರಿಸರಕ್ಕೆ ಧಕ್ಕೆಯಾಗದಂತೆ ತಜ್ಞರ ವರದಿ ಪಡೆದು ಮುನ್ನಡೆಯಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ರಸ್ತೆಯನ್ನು ಈಗಿರುವ 6.5 ಮೀಟರ್ನಿಂದ 9.5 ಮೀಟರ್ಗೆ ವಿಸ್ತರಿಸುವ ಬಗ್ಗೆ ರಾಜ್ಯದ ಲೋಕೋಪಯೋಗಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರದಲ್ಲೇ ಅಂತಿಮ ತೀಮಾರ್ನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಅಮೃತ್ ಭಾರತ್ ನಿಲ್ದಾಣಕ್ಕೆ ಶ್ರೀಘ್ರ ಅನುದಾನ
ಅಮೃತ್ ಭಾರತ್ ಸ್ಟೇಶನ್ ಯೋಜನೆಯಡಿ ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ಉಡುಪಿ ರೈಲ್ವೆ ನಿಲ್ದಾಣವನ್ನು ಅತ್ಯಾಧುನಿಕವಾಗಿ ನವೀಕರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡನೇ ಹಂತದಲ್ಲಿ ಮಂಜೂರಾಗುವ ನಿರೀಕ್ಷೆಯಿದ್ದು, ಮಂಜೂರಾತಿ ಸಿಕ್ಕ ತಕ್ಷಣ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದರು.
ಮೈಸೂರು ಕಂಬಳ ವಿಚಾರವನ್ನು ಅನಗತ್ಯವಾಗಿ ಬಿಜೆಪಿಯ ಮೇಲೆ ತಿರುಗಿಸಲಾಗಿದೆ ಎಂದು ಆರೋಪಿಸಿದ ಅವರು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಅವಧಿಯಲ್ಲಿ ಕಂಬಳಕ್ಕೆ ಮೊದಲ ಬಾರಿಗೆ 5 ಕೋಟಿ ರೂ. ಅನುದಾನ ನೀಡಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಂಬಳದ ಗುರಿಕಾರ ಶಾಂತರಾಮ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಿಜೆಪಿ ನಿರಂತರವಾಗಿ ಕಂಬಳವನ್ನು ಬೆಂಬಲಿಸುತ್ತಲೇ ಬಂದಿದೆ ಎಂದು ಹೇಳಿದರು.
ಮೈಸೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕಂಬಳ ಆಯೋಜನೆ ಮಾಡುವ ಬದಲು, ಸ್ಥಳಿಯ ರೈತರು, ಕಂಬಳದ ಮಾಲೀಕರು, ಗುರಿಕಾರರು ಹಾಗೂ ಸಂಬಂಧಪಟ್ಟವರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಸರ್ಕಾರ ತನ್ನ ನಿರ್ಧಾರವನ್ನೇ ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕಂಬಳ ನಡೆಸಬಾರದು ಎಂದು ಯಾರೂ ಹೇಳುತ್ತಿಲ್ಲ. ಕಂಬಳಕ್ಕೆ ಶಕ್ತಿ ತುಂಬಿರುವುದು ಬಿಜೆಪಿ ಎಂದು ಹೇಳಿದರು.
ℹ️ ಗೃಹಸಚಿವರಿಗೆ ಆರೆಸ್ಸೆಸ್ ತಲೆಬಿಸಿ ಬೇಡ
ರಾಜ್ಯದಲ್ಲಿ ಮಾದಕವಸ್ತುಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಆತಂಕಕ್ಕೀಡಾಗಿದ್ದಾರೆ. ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕಲಬುರಗಿ ಜೈಲಿನಿಂದ ಆರೋಪಿಗಳು ಪರಾರಿಯಾಗುವಂತಹ ಘಟನೆಗಳು ನಡೆಯುತ್ತಿವೆ. ಆದರೆ ಗೃಹ ಸಚಿವ ಪ್ರಿಯಾಂಕ ರ್ಖಗೆ ಅವರಿಗೆ ಆರೆಸ್ಸೆಸ್ ನೋಂದಣಿ ಆಗಿಲ್ಲ ಎಂಬುದೇ ದೊಡ್ಡ ತಲೆನೋವಿನ ವಿಚಾರವಾಗಿದೆ ಎಂದು ಕೋಟ ವ್ಯಂಗ್ಯವಾಡಿದರು. ಕಾರಾಗೃಹದಿಂದ ಕೈದಿಗಳು ಪರಾರಿಯಾಗುವಾಗ, ರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ಹಾಗೂ ಕೊಲೆಗಳು ನಡೆಯುವಾಗ, ಶಾಲೆಗಳ ಎದುರು ಮಾದಕ ವಸ್ತುಗಳ ಮಾರಾಟ ನಡೆಯುವಾಗ ಅವುಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.