Crime 
ಉಡುಪಿ

ಪನತ್ತಡಿಯಲ್ಲಿ ಜಿಂಕೆ ಬೇಟೆ, ಓರ್ವ ಸೆರೆ

ಇಂದಿರಾ ಎನ್ ಕೆ
ಕಾಸರಗೋಡು: ಜಿಲ್ಲೆಯ ಪನತ್ತಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಸಿಬ್ಬಂದಿ ಪನತ್ತಡಿ ಪಂಚಾಯತ್ ವ್ಯಾಪ್ತಿಯ ಎಂ.ಎಚ್.ಸಿದ್ದೀಖ್ (50) ಎಂಬಾತನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ನೌಫಲ್ ಮತ್ತು ಸುಬ್ಬೀರ್ ಪರಾರಿಯಾಗಿದ್ದಾರೆ.
ಪನತ್ತಡಿ ಕಾಟೂರುಕೂಪ್ ಪ್ರದೇಶದಲ್ಲಿ ವನ್ಯಜೀವಿ ಬೇಟೆ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ವಾಹಿತಿಯನ್ವಯ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಕಾಸರಗೋಡ್ ರೇಂಜ್ ಫಾರೆಸ್ಟ್ ಆಫೀಸರ್ ಕೆ.ರಾಹುಲ್ ನಿರ್ದೇಶನದ ಮೇರೆಗೆ ಪನತ್ತಡಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಎಂ.ಪಿ.ರಾಜು ನೇತೃತ್ವದ ತಂಡ ಗುರುವಾರ ಕಾಟೂರು ಕೂಪ್ ಪ್ರದೇಶಕ್ಕೆ ತೆರಳಿದ್ದು, ತಪಾಸಣೆ ವೇಳೆ ದೊಡ್ಡ ಚೀಲದಲ್ಲಿ ವಾಂಸದೊಂದಿಗೆ ಮೂವರು ಸಂಚರಿಸುತ್ತಿದ್ದರು. ಅಧಿಕಾರಿಗಳನ್ನು ಕಂಡ ತಕ್ಷಣ ಪರಾರಿಯಾಗಲೆತ್ನಿಸಿದ್ದು, ಈ ವೇಳೆ ಸಿದ್ದೀಖ್‌ನನ್ನು ಸೆರೆ ಹಿಡಿದಿದ್ದಾರೆ. ನೌಫಲ್ ಮತ್ತು ಸುಬ್ಬೀರ್ ಪರಾರಿಯಾಗಿದ್ದಾರೆ. 40 ಕೆ.ಜಿ. ಜಿಂಕೆಯ ಮಾಂಸ, ಬೇಟೆಗೆ ಬಳಸಿದ್ದರೆನ್ನಲಾದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆರೋಪಿಗಳ ಸೆರೆಗೆ ಶೋಧ ಮುಂದುವರಿಸಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶ, ಇಬ್ಬರು ಅರೆಸ್ಟ್

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಾದಕವಸ್ತು ವಶಪಡಿಸಿಕೊಂಡಿರುವ ಪೊಲೀಸರು ಪೆರುಂಬಳ ಚಟ್ಟಂಚಾಲ್‌ನ ಮೊಹಮ್ಮದ್ ಫೈಸಲ್ ಅಲಿಯಾಸ್ ಫೈಸಲ್ (34) ಹಾಗೂ ವಿಜಯ ಕ್ವಾರ್ಟರ್ಸ್‌ನ ಯಾಸೀರ್ ಎಂಬುವರ ಪತ್ನಿ ತಸ್ಲಿಂ ಫರ್ಸಾನ (24) ಎಂಬುವರನ್ನು ಬಂಧಿಸಿದ್ದಾರೆ. 1 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ರಾ. ಹೆದ್ದಾರಿಯ ಚೆರ್ಕಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ‘ಡ್ಯಾನ್ಸಾಫ್’ ತಂಡ ಹಾಗೂ ವಿದ್ಯಾನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಾಸರಗೋಡು ಕಡೆಯಿಂದ ಚಟ್ಟಂಚಾಲ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯನ್ನು ಬಂಧಿಸಲಾಗಿದೆ. ಕಾರು, ವಾದಕವಸ್ತು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನೇಣಿಗೆ ಶರಣಾದ ಕೃಷಿಕ

ಕಾಸರಗೋಡು: ಪತ್ನಿ ನೇಣು ಬಿಗಿದು ಆತ್ಮಹತ್ಯೆಗೈದ ಒಂದೇ ತಿಂಗಳ ಅಂತರದಲ್ಲಿ ಪತಿಯೂ ನೇಣಿಗೆ ಶರಣಾಗಿದ್ದಾರೆ. ವೆಳ್ಳರಿಕ್ಕುಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪರಪ್ಪ ಬಿರಿಕುಳಂ, ಕುರುಂಬಾಯಿಯ ಕೆ.ಪವಿತ್ರನ್ (58) ಮೃತರು. ಪತ್ನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಅದೇ ಫ್ಯಾನಿಗೆ ಇವರು ನೇಣು ಬಿಗಿದುಕೊಂಡಿದ್ದಾರೆ. ಕೆಲಸಕ್ಕೆ ತೆರಳಿದ್ದ ಪುತ್ರ ಮನೆಗೆ ವಾಪಸಾದಾಗ ಪವಿತ್ರನ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ವೆಳ್ಳರಿಕ್ಕುಂಡ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಜಾಂಡೀಸ್‌ಗೆ ಇಬ್ಬರು ಮೃತ್ಯು

ಕಾಸರಗೋಡು: ಜಿಲ್ಲೆಯಲ್ಲಿ ಜಾಂಡೀಸ್ ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮೃತಪಟ್ಟಿದ್ದಾರೆ. ಉಪ್ಪಳ ಬಳಿಯ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಡಿ.ಭೋಜ ಎಂಬುವರ ಪುತ್ರ, ಕೂಲಿ ಕಾರ್ಮಿಕ ರಂಜಿತ್ (38) ಗುರುವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಐದು ದಿನಗಳ ಹಿಂದೆ ಅವರಿಗೆ ಜ್ವರ ಬಾಧಿಸಿದ್ದರಿಂದ ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಜಾಂಡೀಸ್ ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ನೆಲ್ಲಿಕಟ್ಟೆ ನಿವಾಸಿ, ಪ್ರಸಕ್ತ ಕೋಟಪ್ಪಾರದಲ್ಲಿ ವಾಸಿಸುತ್ತಿದ್ದ ಡಿ.ರಾಧಾಕೃಷ್ಣನ್ (48) ಎಂಬುವರು ಗುರುವಾರ ಮೃತಪಟ್ಟಿದ್ದಾರೆ. ಕೋಟಪ್ಪಾರದಲ್ಲಿರುವ ವಿಠಲ್ ಕ್ಯಾಶ್ಯೂ ಕಂಪನಿಯ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರಿಗೆ ಜಾಂಡೀಸ್ ಬಾಧಿಸಿತ್ತು.

13 ವರ್ಷಗಳ ಬಳಿಕ ಆರೋಪಿ ಬಂಧನ

ಕಾಸರಗೋಡು: ನಗರದ ಅಣಂಗೂರು ಜೆ.ಪಿ.ಕಾಲನಿ ನಿವಾಸಿ, ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದ ಜ್ಯೋತಿಷ್ ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ತಳಂಗರೆ ಪಳ್ಳಿಕಾಲ್, ಪಡುಪ್ಪಿಲ್ ಮನೆಯ ಅಬ್ದುಲ್ ಷಹೀರ್ ಅನಸ್(33)ನನ್ನು 13 ವರ್ಷಗಳ ನಂತರ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿತು. 2013ರಲ್ಲಿ ಜ್ಯೋತಿಷ್ ಕೊಲೆ ಯತ್ನ ಪ್ರಕರಣ ನಡೆದಿತ್ತು.

ಯುವತಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ

ಕಾಸರಗೋಡು: ಕೆಲಸ ಕೊಡಿಸುವ ಭರವಸೆ ನೀಡಿ ಕರ್ನಾಟಕ ಮೂಲದ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಬೇಕಲ ಪಳ್ಳಿಕೆರೆ ನಿವಾಸಿ ಸೈಫ್ ಆಸಿಫ್ (28) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿದ್ದ ಈತ ತಲೆಮರೆಸಿಕೊಂಡು, ತನ್ನ ಅಡಗುತಾಣ ಬದಲಾಯಿಸುತ್ತಿದ್ದ. ಪ್ರಕರಣದ ಇನ್ನೊಬ್ಬ ಆರೋಪಿ ಹೊಸದುರ್ಗ ತಾಲೂಕಿನ ಇರಿಯ ಪಾರಮ್ಮಲ್ ನಿವಾಸಿ ಬಷೀರ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೂವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್

ಕಾಸರಗೋಡು: ವರದಕ್ಷಿಣೆಗಾಗಿ ಕಿರುಕುಳಕ್ಕೆ ಸಂಬಂಧಿಸಿ ಪತಿ ಸೇರಿದಂತೆ ಮೂವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಳೂರು ಬಜ್ಪೆ ಬಂಕರ್ ಕೊಟೇಜ್‌ನ ಆಯಿಷಾ ಪಿ.ಎಚ್.(39) ಎಂಬುವರ ದೂರಿನ ಮೇರೆಗೆ ಪತಿ ಅಬ್ದುಲ್ ಹಮೀದ್, ಆತನ ಸಂಬಂಧಿಕರಾದ ಶಬಾನಾ ಮತ್ತು ಸಾಜನ್ ವಿರುದ್ಧ ಕೇಸು ದಾಖಲಾಗಿದೆ. 2013 ಡಿಸೆಂಬರ್ 22ರಂದು ಅಬ್ದುಲ್ ಹಮೀದ್ ಅವರೊಂದಿಗೆ ಆಯಿಷಾ ವಿವಾಹವಾಗಿತ್ತು. 2014 ಏಪ್ರಿಲ್‌ನಿಂದ ಕುಂಬಳೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತದರು. ಜತೆಗೆ ಶಬಾನಾ ಹಾಗೂ ಸಾಜನ್ ಕೂಡ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಯಿಷಾ ತಿಳಿಸಿದ್ದಾರೆ.