ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ
* 6ರಲ್ಲಿ 5 ವಿಭಾಗಕ್ಕೆ ಡಿಡಿಯುಪಿಎಸ್ವಿಪಿ ಪ್ರಶಸ್ತಿ
ಉಡುಪಿ: ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಪ್ರಕಟಿಸಿದ 2025ನೇ ಸಾಲಿನ 'ದೀನ ದಯಾಳ ಉಪಾಧ್ಯಾಯ ಪಂಚಾಯತ್ ಸತತ ಅಭಿವೃದ್ಧಿ ಪುರಸ್ಕಾರ (ಡಿಡಿಯುಪಿಎಸ್ವಿಪಿ)'ಕ್ಕೆ ರಾಜ್ಯಗಳಿಗೆ ಕೊಡುವ ಒಟ್ಟು 6ರಲ್ಲಿ 5 ವಿಭಾಗಗಳಲ್ಲಿ ಉಡುಪಿ ಜಿಲ್ಲೆಯ ಗ್ರಾಪಂಗಳು ಆಯ್ಕೆಯಾಗಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ ಬಡತನ ನಿರ್ಮೂಲನೆ ವಿಭಾಗದಲ್ಲಿ, ಮಡಾಮಕ್ಕಿ ಗ್ರಾಪಂ ಜಲ ಸಮೃದ್ಧ ವಿಭಾಗದಲ್ಲಿ, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಪಂ ಆರೋಗ್ಯ ಪಂಚಾಯತ್ ವಿಭಾಗದಲ್ಲಿ, ಹಕ್ಲಾಡಿ ಗ್ರಾಪಂ ಸಾಮಾಜಿಕ ನ್ಯಾಯ ಪಂಚಾಯತ್ ವಿಭಾಗದಲ್ಲಿ ಹಾಗೂ ಕಾರ್ಕಳ ತಾಲೂಕಿನ ಸಾಣೂರು ಗ್ರಾಪಂ ಸ್ವಯಂ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಸಾಧನೆ ಮಾಡಿದೆ.
ಕೇಂದ್ರ ಸರ್ಕಾರದ ಈ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ 5 ಗ್ರಾಪಂಗಳು ಆಯ್ಕೆಯಾಗಿರುವುದು ತೀವ್ರ ಸಂತಸ ತಂದಿದೆ. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ಸಾಧನೆ ಮಾಡಿರುವ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಕೇದ್ರ ಸರ್ಕಾರವನ್ನೂ ನಾನು ಅಭಿನಂದಿಸುತ್ತೇನೆ. ಇಂತಹ ಸಾಧನೆ ಜಿಲ್ಲೆಯ ಇನ್ನಿತರ ಗ್ರಾಪಂಗಳಿಗೂ ಪ್ರೇರಣೆಯಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.