ಉಡುಪಿಯಲ್ಲಿ ನಿರಂತರ ಆರು ತಾಸುಗಳ ಕಾಲ ಗಾನ ನರ್ತನದ ಮೂಲಕ ಸಾಧನೆ ಮಾಡಿದ ವಿದುಷಿ ದೀಕ್ಷಾ ರಾಮಕೃಷ್ಣ ಅವರಿಗೆ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ನ ಏಷಿಯಾ ಹೆಡ್​ ಡಾ. ಮನಿಷ್​ ವಿಶ್ನೋಯ್​ ವಿಶ್ವ ದಾಖಲೆಯ ಪ್ರಮಾಣ ಪತ್ರ ನೀಡಿದರು. ಡಾ. ಭರತ್​ ಕಾಮತ್​, ವೇದವ್ಯಾಸ ತಂತ್ರಿ, ಡಾ. ಎಂ.ವಿಶ್ವನಾಥ್​ ಪೈ, ಸಿ.ರಾಘವೇಂದ್ರ ಆಚಾರ್ಯ, ಡಾ. ಶರಣ ಬಸವ, ಡಾ. ರಾಮಕೃಷ್ಣ ಹೆಗಡೆ, ಯಶಾ ರಾಮಕೃಷ್ಣ ಇದ್ದರು. 
ಉಡುಪಿ

ಪುರಂದರ ಗಾನ-ನರ್ತನದಲ್ಲಿ 'ದೀಕ್ಷಾ' ವಿಶ್ವ ದಾಖಲೆ

* ನಿರಂತರ 6 ತಾಸು ಸ್ವಯಂ ಹಾಡುತ್ತಲೇ ನೃತ್ಯ ಪ್ರದರ್ಶನ

* ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ ಸಾಧನೆ

ಉಡುಪಿ: ಉಡುಪಿಯ ಸಂಗೀತ-ನೃತ್ಯಕಲಾ ಕ್ಷೇತ್ರವು ಇನ್ನೊಂದು ವಿಶ್ವ ದಾಖಲೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಹೆಜ್ಜೆ ಗೆಜ್ಜೆ ಫೌಂಡೇಶನ್​ ಉಡುಪಿ-ಮಣಿಪಾಲದ ಸಹನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣ ಅವರ ಹೊಸ ಸೃಜನಶೀಲ ಪ್ರಯತ್ನಕ್ಕೆ 'ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​'ನಿಂದ ಅಧಿಕೃತ ದಾಖಲೆಯ ಪ್ರಶಸ್ತಿ ಒಲಿದಿದೆ.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ (ಜ.3) ಬೆಳಗ್ಗೆ 8:58ಕ್ಕೆ ಸರಿಯಾಗಿ ಏಕವ್ಯಕ್ತಿ 'ಪುರಂದರ ಗಾನ ನರ್ತನ' ಆರಂಭಿಸಿದ ದೀಕ್ಷಾ, ಮಧ್ಯಾಹ್ನ 4:13 ಗಂಟೆಯ ವರೆಗೆ ಹಾಡುತ್ತಲೇ ನೃತ್ಯ ಮಾಡುವ ಮೂಲಕ ಹೊಸ ಸಾಧನೆ ಮೆರೆದರು.

6 ತಾಸು 15 ನಿಮಿಷ ಹಾಡುತ್ತ ನರ್ತನ

ಸಂಗೀತ-ನೃತ್ಯ ಕ್ಷೇತ್ರದಲ್ಲಿ ಈವರೆಗೆ ಯಾರೂ ಮಾಡದ ವಿಶಿಷ್ಟ ಸಾಧನೆಯ ಖ್ಯಾತಿಗೆ ದೀಕ್ಷಾ ರಾಮಕೃಷ್ಣ ಭಾಜನರಾಗಿದ್ದಾರೆ. ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಪ್ರಯತ್ನದಲ್ಲಿ ನಿರಂತರ 6 ತಾಸು 15 ನಿಮಿಷಗಳ ಕಾಲ ಪುರಂದರ ದಾಸರ 60ಕ್ಕೂ ಅಧಿಕ ಕೃತಿಗಳನ್ನು ಸ್ವಯಂ ಹಾಡುತ್ತ, ಹಾವ-ಭಾವದೊಂದಿಗೆ ನೃತ್ಯ ಮಾಡುತ್ತ ವಿಶ್ವ ದಾಖಲೆ ಸ್ಥಾಪಿಸಿ ಗಮನ ಸೆಳೆದರು.

ಪ್ರದರ್ಶನಕ್ಕೆ ಚಾಲನೆ

ದೀಕ್ಷಾ ರಾಮಕೃಷ್ಣ ಅವರ 'ಪುರಂದರ ಗಾನ ನರ್ತನ' ವಿಶ್ವ ದಾಖಲೆಯ ಪ್ರಯತ್ನದ ಕಾರ್ಯಕ್ರಮಕ್ಕೆ ಹಿರಿಯ ಸಂಗೀತ ಗುರು ವಿದ್ವಾನ್​ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಚಾಲನೆ ನೀಡಿದರು. ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ನ ಏಷಿಯಾ ಹೆಡ್​ ಡಾ. ಮನಿಷ್​ ವಿಶ್ನೋಯ್​, ಹೆಜ್ಜೆ ಗೆಜ್ಜೆ ಫೌಂಡೇಶನ್​ನ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ, ನೃತ್ಯಗುರು ಲಕ್ಷ್ಮೀ ಗುರುರಾಜ, ಸಂಗೀತ ಗುರು ವಿನುತಾ ಆಚಾರ್ಯ, ಡಾ. ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.

ನಾಲ್ಕನೇ ವಯಸ್ಸಿನಿಂದಲೇ ಅಭ್ಯಾಸ

ತಾಯಿ ಯಶಾ ರಾಮಕೃಷ್ಣ ಭರತನಾಟ್ಯ ಕಲಾವಿದೆಯಾಗಿದ್ದರಿಂದ ಬಾಲ್ಯದಿಂದಲೇ ದೀಕ್ಷಾ ಅವರಿಗೆ ನೃತ್ಯದತ್ತ ಆಸಕ್ತಿಯಿತ್ತು. ಕೇವಲ 4ನೇ ವರ್ಷಕ್ಕೆ ಕಾಲಿಗೆ ಗೆಜ್ಜೆ ಕಟ್ಟಿ ತಾಯಿಯಿಂದಲೇ ಭರತನಾಟ್ಯ ಕಲಿಕೆ ಆರಂಭಿಸಿದರು. ತಂದೆ ರಾಮಕೃಷ್ಣ ಹೆಗಡೆ ಕೆರೆಮನೆ ಅವರ ಪ್ರೋತ್ಸಾಹದಲ್ಲಿ ನಾಟ್ಯದೊಂದಿಗೆ ಸಂಗೀತವನ್ನೂ ಕಲಿತಿದ್ದು, ಆರಂಭದಲ್ಲಿ ವಿದುಷಿ ಉಮಾಶಂಕರಿ ಅವರಲ್ಲಿ ಹಾಗೂ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರಲ್ಲಿ ಕಲಿತರು. ಅಲ್ಲದೆ, ಮಣಿಪಾಲದ ಸಿ.ರಾಘವೇಂದ್ರ ಆಚಾರ್ಯ ಅವರಲ್ಲಿ ಸುಗಮ ಸಂಗೀತವನ್ನೂ ಕಲಿತಿದ್ದಾರೆ. ಈಟಿವಿ ಕನ್ನಡ ವಾಹಿನಿಯಲ್ಲಿ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸುತ್ತಿದ್ದ 'ಎದೆ ತುಂಬಿ ಹಾಡುವೆನು' ಶೋನಲ್ಲಿ 2 ಬಾರಿ ವಿಜೇತರಾಗಿದ್ದಾರೆ. ಅಲ್ಲದೆ, ಝೀ ಕನ್ನಡ ವಾಹಿನಿಯ ಸರಿಗಮಪ ಸೀಜನ್​ 13ರಲ್ಲಿ ಫೈನಲ್​ ಹಂತ ತಲುಪಿದ್ದರು. ಆಕಾಶವಾಣಿಯ ಬಿ ಹೈಗ್ರೇಡ್​ ಕಲಾವಿದೆ ಆಗಿರುವ ದೀಕ್ಷಾ, ರಾಜ್ಯ-ರಾಷ್ಟ್ರ ಮಟ್ಟದ ಸ್ಕಾಲರ್​ಶಿಪ್​ಗೂ ಭಾಜನರಾಗಿದ್ದಾರೆ. ಬಿಇ, ಎಂಬಿಎ ವ್ಯಾಸಂಗ ಮುಗಿಸಿರುವ ಅವರು ಸಂಗೀತ-ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ತನ್ನ ಕನಸನ್ನು ನಿರಂತರ ಶ್ರಮದ ಮೂಲಕ ಇದೀಗ ವಿಶ್ವ ದಾಖಲೆಯ ಮೂಲಕ ಸಾಕಾರ ಮಾಡಿಕೊಂಡಿದ್ದಾರೆ.

ನಾನೆಂದೂ ಇಂತಹ ಪ್ರದರ್ಶನ ನೋಡಿಲ್ಲ!

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಗೋಲ್ಡನ್​ ಬುಕ್​ ಆಫ್ ವರ್ಲ್ಡ್​ ರೆಕಾರ್ಡ್ಸ್​ನ ಏಷಿಯಾ ಹೆಡ್​ ಡಾ. ಮನಿಷ್​ ವಿಶ್ನೋಯ್​ ಮಾತನಾಡಿ, ದೀಕ್ಷಾ ರಾಮಕೃಷ್ಣ ಅವರು ದಾಖಲೆಗೆ ಇರುವ ಮಾನದಂಡದ ನಿಯಮಾನುಸಾರ ಎಲ್ಲವನ್ನೂ ನಿಭಾಯಿಸಿ ವಿಶ್ವ ದಾಖಲೆ ಮಾಡಿದ್ದಾರೆ ಎಂದು ದೀಕ್ಷಾಳ ಸಾಧನೆ ವಿಶಿಷ್ಟತೆ ಹೊಂದಿದೆ. ನಾನೆಂದೂ ಇಂತಹ ಪ್ರದರ್ಶನ ನೋಡಿರಲಿಲ್ಲ. ಹಾಡನ್ನು ಸ್ವಯಂ ಹೇಳುತ್ತ ನೃತ್ಯ ಮಾಡುವುದು ಅತ್ಯಂತ ಕಠಿಣ ಕಾರ್ಯ. ಭಾರತೀಯ ಕ್ಲಾಸಿಕಲ್​ ಸಂಗೀತ ಹಾಗೂ ನೃತ್ಯ ಪ್ರದರ್ಶನ ಸುಲಭವಲ್ಲ. ಆದರೂ ಅವರು ನೈಜ ಪ್ರದರ್ಶನ ತೋರಿ ವಿಶ್ವ ದಾಖಲೆ ಮಾಡಿದ್ದಾರೆ ಎಂದು ತಿಳಿಸಿ, ಪ್ರಮಾಣ ಪತ್ರ ನೀಡಿ, ಪದಕ ವಿತರಿಸಿದರು.
ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ನ ಕರ್ನಾಟಕ ಹೆಡ್​ ಡಾ. ಭರತ್​ ಕಾಮತ್​, ಪಲಿಮಾರು ಮಠದ ದಿವಾನ ವಿದ್ವಾನ್​ ವೇದವ್ಯಾಸ ತಂತ್ರಿ, ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್​, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್​ ಪೈ, ಸಿ.ರಾಘವೇಂದ್ರ ಆಚಾರ್ಯ ಮಣಿಪಾಲ, ದೀಕ್ಷಾಳ ಪತಿ ಡಾ. ಶರಣ ಬಸವ ಉಪಸ್ಥಿತರಿದ್ದರು.
ಡಾ. ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಯಶಾ ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್​ ಕಾಮತ್​ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ದೀಕ್ಷಾ ರಾಮಕೃಷ್ಣ ಹಾಗೂ ಹೆಜ್ಜೆ ಗೆಜ್ಜೆ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ದಿನೇಶ್​ ಸುವರ್ಣ ರಾಯಿ ನಿರ್ವಹಿಸಿದರು.
"

ಆರೋಗ್ಯ-ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಉಡುಪಿ ಜಿಲ್ಲೆ ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೂ ವಿಶ್ವದಾಖಲೆಯ ಮೂಲಕ ಗಮನ ಸೆಳೆಯುತ್ತಿದೆ. ದೀಕ್ಷಾ ರಾಮಕೃಷ್ಣ ಅವರು ಗಾಯನ-ನೃತ್ಯದ ಮೂಲಕ ವಿಶಿಷ್ಟವಾಗಿ ವಿಶ್ವ ದಾಖಲೆ ಮಾಡುವ ಮೂಲಕ ಉಡುಪಿಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಸಮಸ್ತ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

"

ಪುರಂದರ ದಾಸರು ರಚಿಸಿರುವ ಕೃತಿಗಳು ಅದು ಕೇವಲ ಹಾಡಷ್ಟೇ ಅಲ್ಲ. ಅದು ದೇವರ ಒಲುಮೆಯನ್ನು ಪಡೆಯಲು ಭಕ್ತರಿಗೆ ಇರುವ ಸರಳವಾದ ಉಪನಿಷತ್​ ಆಗಿದೆ. ಶ್ರೀಕೃಷ್ಣನ ನಾಡಿನಲ್ಲಿ ಪುರಂದರ ದಾಸರ ಹಾಡನ್ನು ಹೇಳುತ್ತ, ಹಾವ-ಭಾವದೊಂದಿಗೆ ನೃತ್ಯ ಮಾಡುತ್ತ ವಿಶ್ವ ದಾಖಲೆ ಮಾಡಿರುವ ದೀಕ್ಷಾ ರಾಮಕೃಷ್ಣ ಅವರ ಸಾಧನೆ ಶ್ರೀಕೃಷ್ಣನ ಚಿತ್ತಕ್ಕೂ ಬಂದಿದೆ.

"

ನನ್ನ ಶಿಷ್ಯೆಯಾದ ವಿದುಷಿ ದೀಕ್ಷಾ, ಸಾಹಿತ್ಯ ಶುದ್ಧ ಹಾಗೂ ನೃತ್ಯ ಶುದ್ಧವಾಗಿ ಮಾಡಿದ್ದಾರೆ. ಹಾಡುತ್ತ ನೃತ್ಯ ಮಾಡುವುದು ಸುಲಭವಲ್ಲ. ಅವಳ ಭಾವನೆ ಕೃಷ್ಣ-ಯಶೋದಾರಿಂದ ಆರಂಭಿಸಿ, ದ್ರೌಪದಿ ವಸ್ತ್ರಾಪಹರಣದವರೆಗೂ ಸ್ವಯಂ ನೃತ್ಯ ಸಂಯೋಜನೆ ಮಾಡಿದ್ದಾಳೆ. ಅವಳ ಶ್ರಮ ದಾಖಲೆಯಲ್ಲಿ ಸಾರ್ಥಕತೆ ಕಂಡಿದೆ. ಇನ್ನಷ್ಟು ಸಾಧನೆ ಮಾಡಲಿ.

"

ಸಂಗೀತ-ಭರತನಾಟ್ಯ ಎರಡೂ ಕಲಿತಿದ್ದರಿಂದ ಈ ಎರಡೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದೆ. ಹಾಡುತ್ತಲೇ ನರ್ತನ ಮಾಡುವ ಮೂಲಕ ಸಾಧನೆ ಮಾಡಲು 'ಪುರಂದರ ಗಾನ ನರ್ತನ' ಯೋಜಿಸಿ ಪ್ರಯತ್ನಿಸಿದೆ. ಇದಕ್ಕಾಗಿ 2 ತಿಂಗಳು ಪರಿಶ್ರಮಪಟ್ಟಿದ್ದೆ. ಅದೀಗ ವಿಶ್ವ ದಾಖಲೆ ಆಗಿರುವುದು ಕಲಿಕೆಯ ಸಾರ್ಥಕತೆ ಮೂಡಿದೆ. ಕಲಿಸಿದ ಗುರುಗಳ ಸಮ್ಮುಖದಲ್ಲಿ ಶ್ರೀಕೃಷ್ಣನ ದೈವಶಕ್ತಿಯಿಂದ ಸಾಧನೆ ಮಾಡಿರುವುದು ನೆಮ್ಮದಿ ತಂದಿದೆ.