ಉಡುಪಿ: ನಾಡಿನಾದ್ಯಂತ ಜನಪ್ರಿಯವಾಗಿರುವ ಕರಾವಳಿಯ ಯಕ್ಷಗಾನ ಕಲೆಯನ್ನು 'ಕರ್ನಾಟಕ ರಾಜ್ಯ ಕಲೆ' ಎಂದು ಘೋಷಿಸುವಂತೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಕರಾವಳಿಯ 'ಗಂಡುಕಲೆ' ಎಂದೇ ಪ್ರಖ್ಯಾತವಾಗಿರುವಹಾಗೂ ಶತಶತಮಾನಗಳ ಇತಿಹಾಸ ಹೊಂದಿರುವ ಈ ಕಲೆಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ 'ಕರ್ನಾಟಕ ರಾಜ್ಯ ಕಲೆ' ಎಂಬ ಮಾನ್ಯತೆ ಅಗತ್ಯವಾಗಿದೆ. ಸರ್ಕಾರದ ಕೂಡಲೇ ಅಧಿಕೃತವಾಗಿ ಘೋಷಿಸಬೇಕು ಎಂದು ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಕರ್ನಾಟಕದ ಹೆಮ್ಮೆಯ ಹಾಗೂ ಜೀವಂತ ರಂಗಕಲೆಯಾದ ಯಕ್ಷಗಾನವು ವಿಶಿಷ್ಟ ಮತ್ತು ಜನಮನದಲ್ಲಿ ಆಳವಾಗಿ ಬೇರೂರಿರುವ ಸಾಂಪ್ರದಾಯಿಕ ರಂಗಕಲೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಭಾಗಗಳಲ್ಲಿ ಜನಜೀವನದೊಂದಿಗೆ ಬೆಸೆದುಕೊಂಡಿದೆ. ಬೇರೆ ಬೇರೆ ರೀತಿಯಲ್ಲಿ ಗುರುತಿಸಲ್ಪಟ್ಟಿದ್ದರೂ ಪಡುವಲಪಾಯ ಮತ್ತು ಮೂಡಲಪಾಯ ಎಂಬ ಪ್ರಬೇಧ ಮುಖ್ಯವಾಗಿದೆ. ಪಡುವಲಪಾಯದಲ್ಲಿ ತೆಂಕು, ಬಡಗು, ಬಡಾಬಡಗು ಎಂಬ 3 ಪ್ರಕಾರಗಳಿದ್ದು ರಾಜ್ಯಾದ್ಯಂತ ಕನ್ನಡ ಭಾಷೆ ಉಳಿಸುವಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಲಾಗಿದೆ.
ಕಲೆಗೆ ಕೊಡುಗೆ
ಕೇರಳ ರಾಜ್ಯದಲ್ಲಿ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಹಾರಾಷ್ಟ್ರದಲ್ಲಿ ಲಾವಣಿ, ಆಂಧ್ರಪ್ರದೇಶದಲ್ಲಿ ಕೂಚಿಪುಡಿ ಕಲೆಯು ರಾಜ್ಯದ ಕಲೆಯಾಗಿ ರಾರಾಜಿಸುತ್ತಿದೆ. ಅದರಂತೆಯೇ ಕರ್ನಾಟಕದಲ್ಲಿ ಯಕ್ಷಗಾನವನ್ನು ರಾಜ್ಯ ಕಲೆಯಾಗಿ ಘೋಷಿಸಬೇಕು. ಕಲೆಯ ಸಮಗ್ರ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ.
ಇದು ಕೇವಲ ನೃತ್ಯ ಕಲೆಯಲ್ಲ. ಭಾಗವತಿಕೆ, ಹಾಡು, ವಾದ್ಯ ಸಂಗೀತ, ಸಂಭಾಷಣೆ, ಅಭಿನಯ, ನೃತ್ಯ, ಅದ್ದೂರಿ ವೇಷ-ಭೂಷಣ, ಮುಖವರ್ಣಿಕೆ ಮತ್ತು ರಂಗಭೂಮಿ ಎಲ್ಲವೂ ಸಮ್ಮಿಳಿತವಾಗಿದೆ. ರಾಜ್ಯ ಪ್ರವಾಸೋದ್ಯಮದ ಪ್ರಕಾರ ಇದು ಸಂಗೀತ, ಹಾಡು, ನೃತ್ಯ ಮತ್ತು ಪಾಂಡಿತ್ಯಪೂರ್ಣ ಸಂಭಾಷಣೆಯ ಅಪೂರ್ವ ಸಂಯೋಜನೆಯಾಗಿದೆ. ಈ ಕಲೆಗೆ ಬದುಕನ್ನೇ ಸಮರ್ಪಿಸಿಕೊಂಡ 15 ಸಾವಿರಕ್ಕೂ ಅಧಿಕ ವೃತ್ತಿ ಕಲಾವಿದರಿದ್ದಾರೆ. ಸಾವಿರಾರು ಹವ್ಯಾಸಿ ಕಲಾವಿದರಿದ್ದಾರೆ. 100ಕ್ಕೂ ಅಧಿಕ ಯಕ್ಷಗಾನ ಮೇಳಗಳಿವೆ. 10 ಸಾವಿರಕ್ಕೂ ಅಧಿಕ ಕೃತಿಗಳು, 10 ಲಕ್ಷಕ್ಕೂ ಅಧಿಕ ಹಾಡುಗಳಿವೆ. ಈ ಕಲೆಯ ಕುರಿತು 50ಕ್ಕೂ ಹೆಚ್ಚು ಪಿ.ಎಚ್ಡಿ ಅಧ್ಯಯನ ನಡೆದಿದೆ. ಅದೇ ಪ್ರಮಾಣದಲ್ಲಿ ಎಂ.ಫಿಲ್ ಅಧ್ಯಯನವೂ ನಡೆದಿದೆ ಎಂದು ಸಿಎಂ ಗಮನಕ್ಕೆ ತರಲಾಗಿದೆ.
ಯಕ್ಷಗಾನ ಕೇವಲ ಮನರಂಜನೆಯ ಕಲೆಯಲ್ಲ. ಭಾರತೀಯ ಪರಂಪರೆಯನ್ನು ನಿರಂತರ ಜೀವಂತಗೊಳಿಸುವ ಅಮೂಲ್ಯ ಸಾಂಸ್ಕೃತಿಕ ಕಲೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ದೇಶದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಜೀವಂತ ಕಲೆ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಾಂಪ್ರದಾಯಿಕ ರಂಗ ರೂಪವೆಂದು ದಾಖಲಿಸಿದೆ. ಮಾನವೀಯತೆ ಸಾರುವ, ಮೌಲ್ಯಾಧಾರಿತ ಶಿಕ್ಷಣ ನೀಡುವ ವಿಶಿಷ್ಟತೆ ಯಕ್ಷಗಾನಕ್ಕಿದೆ. ಎಲ್ಲ ಆಯಾಮ ಪರಾಮರ್ಶಿಸಿದಾಗ 'ಕರ್ನಾಟಕದ ರಾಜ್ಯ ಕಲೆ' ಆಗಲು ಎಲ್ಲ ಅರ್ಹತೆಯೂ ಯಕ್ಷಗಾನಕ್ಕಿದೆ.ಡಾ. ತಲ್ಲೂರು ಶಿವರಾಮ್ ಶೆಟ್ಟಿ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ.