ಉಡುಪಿ ಸರ್ವೀಸ್ ಬಸ್ ನಿಲ್ದಾಣ. (ಸಾಂದರ್ಭಿಕ ಚಿತ್ರ).
* ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮಾಹಿತಿ
* ಡೀಸೆಲ್ ವೆಚ್ಚ ಸರಿದೂಗಿಸಲು ನಿರ್ಧಾರ
ಉಡುಪಿ: ಕೇಂದ್ರ ಸರ್ಕಾರ ಡೀಸೆಲ್ ದರ ಏರಿಕೆ ಮಾಡಿದ್ದರಿಂದ ಖಾಸಗಿ ಬಸ್ಗಳ ಪ್ರಯಾಣ ದರವೂ ಏರಿಕೆ ಆಗುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೇಂದ್ರ ಸರ್ಕಾರ ಲೀಟರ್ಗೆ 3 ರೂ. ಏರಿಕೆ ಮಾಡಿದ್ದು, ಖಾಸಗಿ ಬಸ್ನವರೂ ಸಹ ಶೇ.5ರಷ್ಟು ಪ್ರಯಾಣ ದರ ಏರಿಸಲು ಚಿಂತನೆ ನಡೆಸಿದ್ದೇವೆ ಎಂದು ರಾಜ್ಯ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿ ಸಮರ ಮುಂದುವರಿಸಿದ್ದರಿಂದ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಈ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ಲೀಟರ್ಗೆ 3ರೂ. ದರ ಏರಿಕೆ ಮಾಡಿತ್ತು. ಆದರೆ, ಖಾಸಗಿ ಬಸ್ನವರು ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಪ್ರಸ್ತುತದ ಡೀಸೆಲ್ ದರದಲ್ಲಿ ಈಗಿರುವ ಪ್ರಯಾಣ ದರವನ್ನೇ ಮುಂದುವರಿಸಿದರೆ ಅಪಾರ ನಷ್ಟ ಆಗಲಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದ್ದಾರೆ.
ಬಸ್ ಪ್ರಯಾಣ ದರ ಏರಿಕೆಯ ವಿಚಾರವಾಗಿ ಮುಂದಿನ ವಾರ ಬೆಂಗಳೂರಿನಲ್ಲಿ ರಾಜ್ಯ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಸಭೆ ನಡೆಸಿ ನಿರ್ಧರಿಸಲಿದ್ದೇವೆ. ಟೋಲ್ ಪಾವತಿ ಹಾಗೂ ಸೆಸ್ ಪಾವತಿ ಆಧಾರದಲ್ಲಿ ಓರ್ವ ಪ್ರಯಾಣಿಕನಿಗೆ ಒಂದು ಕಿಮೀಗೆ 25 ಪೈಸೆ ಏರಿಕೆ ಮಾಡಲು ನಿಯಮಾನುಸಾರ ಅವಕಾಶವಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಬಸ್ ಮಾಲೀಕರ ಸಂಘ ಮನವಿ ಸಲ್ಲಿಸಿದೆ ಎಂದು ಸುರೇಶ್ ನಾಯಕ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹಿಂದೆ ಏರಿಕೆ ಮಾಡಿದ್ದ 3ರೂ. ಹಾಗೂ ಕೇಂದ್ರ ಸರ್ಕಾರದ ಈಗಿನ 3 ರೂ. ಏರಿಕೆ ಸೇರಿ ಒಟ್ಟು 6 ರೂ. ದರ ಲೀಟರ್ ಡೀಸೆಲ್ಗೆ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ದರದಲ್ಲಿ ವಾಹನ ಓಡಿಸಿದರೆ ನಷ್ಟ ಆಗುತ್ತದೆ. 6 ರೂ. ಏರಿಕೆಯಾದ ದರ ಸರಿದೂಗಿಸಲು ಪ್ರಯಾಣ ದರ ಏರಿಕೆ ಮಾಡಲಿದ್ದೇವೆ. ನಮಗೂ ಅನಿವಾರ್ಯ.
— ಸುರೇಶ್ ನಾಯಕ್ ಕುಯಿಲಾಡಿ. ರಾಜ್ಯ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ.