Crime 
ಉಡುಪಿ

ಪ್ರೀತಿ ಒಪ್ಪದ ವಿದ್ಯಾರ್ಥಿನಿಗೆ ಕೊಲೆ ಬೆದರಿಕೆ

ಕಡಬ: ಪ್ರೀತಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ನಿರಂತರ ಹಿಂಬಾಲಿಸಿ ಕಿರುಕುಳ ನೀಡಿದ್ದಲ್ಲದೆ, ಆಕೆಯ ಮನೆಯವರಿಗೆ ಕೊಲೆ ಬೆದರಿಕೆ ಹಾಗೂ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದಲ್ಲಿ ಸಂಭವಿಸಿದ್ದು ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಪದ್ಮನಾಭ ಎಂಬಾತ ಆರೋಪಿ. 18 ವರ್ಷದ ಯುವತಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆ ಮನೆಗೆ ಬರುವಾಗ ಸಂಬಂಧಿ ಪದ್ಮನಾಭ ಎಂಬಾತ ನಿರಂತರ ಹಿಂಬಾಲಿಸಿಕೊಂಡು ಬರುತ್ತಿದ್ದನು. ಈ ಕುರಿತು ಯುವತಿಯ ಮನೆಯವರು ಆರೋಪಿಗೆ ಎಚ್ಚರಿಕೆಯನ್ನೂ ನೀಡಿದ್ದರು.

ಜುಲೈ 29ರಂದು ಯುವತಿಯ ಮನೆ ಬಳಿ ಬಂದಿದ್ದ ಆರೋಪಿ ನಮ್ಮಿಬ್ಬರ ಪ್ರೀತಿ ತಪ್ಪಿ ಹೋಯಿತು. ನಾನು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ, ನಾನು ಸಾಯುತ್ತೇನೆ ಎಂದು ಯುವತಿಯ ತಾಯಿ ಹಾಗೂ ಅಕ್ಕನಿಗೆ ಕೇಳಿಸುವಂತೆ ಕೊಲೆ ಬೆದರಿಕೆ ಹಾಕಿದ್ದನು. ಅಲ್ಲದೆ, ಆಗಸ್ಟ್ 10ರಂದು ಮತ್ತೆ ಮನೆ ಬಳಿ ಬಂದ ಆರೋಪಿ, ಯುವತಿಯ ಅಕ್ಕನಿಗೆ ಕರೆ ಮಾಡಿ, ಪ್ರೀತಿಸುವ ಹುಡುಗಿ ನನ್ನೊಂದಿಗೆ ಮಾತನಾಡದಿದ್ದರೆ ನಾನು ಸತ್ತು ಹೋಗುತ್ತೇನೆ ಎಂದು ಬೆದರಿಕೆಯೊಡ್ಡಿದ್ದನು. ಈ ಬಗ್ಗೆ ಈತನ ವಿರುದ್ಧ ಕಡಬ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.