ಗೋವಾದಲ್ಲಿ ಮೃತಪಟ್ಟಿದ್ದ ಉಡಪಿ ಮಲ್ಪೆಯ ಜಲಕ್ರೀಡಾ ದೋಣಿಯ ಉದ್ಯಮಿ ಸಂದೀಪ್​ ಸಾಲಿಯಾನ್​. 
ಉಡುಪಿ

ಗೋವಾದಲ್ಲಿ ಉದ್ಯಮಿ ಸಂದೀಪ್​ ಸಾಲಿಯಾನ್​ ಸಾವು ಪ್ರಕರಣ; ಮಹಿಳೆಯ ಬಂಧನ

* ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಬೆಂಗಳೂರಿನಲ್ಲಿ ವಶಕ್ಕೆ

* ಗೋವಾ ರಾಜ್ಯದ ಪಣಜಿ ಪೊಲೀಸರ ಕಾರ್ಯಾಚರಣೆ

ಉಡುಪಿ: ಗೋವಾದಲ್ಲಿ ಉಡುಪಿಯ ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ (42) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಪ್ರಮುಖ ಆರೋಪಿ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್​ ರೂಪಶ್ರೀ ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಜಲಕ್ರೀಡಾ ದೋಣಿಗಳ ಉದ್ಯಮಿಯಾಗಿದ್ದ ಸಂದೀಪ ಸಾಲಿಯಾನ್​ ಮಲ್ಪೆ ನಿವಾಸಿಯಾಗಿದ್ದು, ಮಾಜಿ ಸಚಿವರೊಬ್ಬರ ಕಾರು ಚಾಲಕರಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ಕೆಲ ವರ್ಷದ ಹಿಂದೆ ಚಾಲಕ ವೃತ್ತಿ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿಯ ವ್ಯವಹಾರ ಆರಂಭಿಸಿದ್ದರು. ಅಲ್ಪಾವಧಿಯಲ್ಲಿಯೇ ಈ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಾಧಿಸಿ ಜಲಕ್ರೀಡಾ ವಲಯದಲ್ಲಿ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

ಗೋವಾದಲ್ಲಿ ಸಾವು

ಗೋವಾಕ್ಕೆ ತೆರಳಿದ್ದ ಸಂದೀಪ ಸಾಲಿಯಾನ್​ ಅವರಿಗೆ ಇದೀಗ ಬಂಧಿತ ಆರೋಪಿ ಅಕ್ಷತಾ ಎಂಬ ಮಹಿಳೆ ಸಿಗರೇಟ್​ ಸೇದಲು ಕೊಟ್ಟಿದ್ದಳು. ಅದನ್ನು ಸೇವಿಸುತ್ತಿದ್ದಂತೆ ಸಂದೀಪ್​ ಪ್ರಜ್ಞಾಹೀನನಾಗಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂದೀಪ್​ ಕುತ್ತಿಗೆಯಲ್ಲಿದ್ದ ದಪ್ಪದಾದ ಚಿನ್ನದ ಸರವನ್ನು ದೋಚಿ ಆಕೆ ಪರಾರಿಯಾಗಿದ್ದಳು ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದು ಬಂದಿದೆ.

ದರೋಡೆಗೆ ಶ್ರೀಮಂತರೇ ಟಾರ್ಗೆಟ್​

ಹಣ ಗಳಿಕೆಗಾಗಿ ಅಕ್ಷತಾ ಶ್ರೀಮಂತರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದಳು. ಶ್ರೀಮಂತರನ್ನು ಪಣಜಿಗೆ ಕರೆಸಿ ಕ್ಯಾಸಿನೋಗಳಿಗೆ ಬರುವಂತೆ ಆಮಿಷ ಒಡ್ಡಿ, ಅವರು ಬಂದ ಬಳಿಕ ಹೋಟೆಲ್​ಗೆ ಕರೆದುಕೊಂಡು ಹೋಗಿ ಮತ್ತು ಭರಿಸುವ ದ್ರವ ಅಥವಾ ಸಿಗರೇಟ್​ ಸೇದಲು ಕೊಟ್ಟು ಪ್ರಜ್ಞೆ ತಪ್ಪಿಸುತ್ತಿದ್ದಳು. ಬಳಿಕ ಅವರ ಕುತ್ತಿಗೆಯಲ್ಲಿದ್ದ ಹಾಗೂ ಕೈಬೆರಳುಗಳಲ್ಲಿದ್ದ ಚಿನ್ನಾಭರಣ ದರೋಡೆ ಮಾಡುತ್ತಿದ್ದಳು ಎಂಬ ಆಘಾತಕಾರಿ ಸಂಗತಿಯೂ ತನಿಖೆಯಲ್ಲಿ ತಿಳಿದುಬಂದಿದೆ. ಗುಜರಾತ್​ನ ಉದ್ಯಮಿ ತೋಮೇಶ್​ ಯಾದವ್​ ಎಂಬ ಉದ್ಯಮಿಯನ್ನೂ ಸಹ ಹನಿಟ್ರ್ಯಾಪ್​ಗೆ ಸಿಲುಕಿಸಿ, ಗೋವಾಕ್ಕೆ ಕರೆಸಿ ಆತನ್ನನ್ನೂ ಪ್ರಜ್ಞೆ ತಪ್ಪಿಸಿ 2.40 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವುದೂ ಸಹ ಇದೀಗ ಬೆಳಕಿಗೆ ಬಂದಿದೆ. ಗೋವಾದಲ್ಲಿ ಕ್ಯಾಸಿನೋಗಳಿಗೆ ಬರುವ ಶ್ರೀಮಂತರನ್ನು ತನ್ನ ಬಲೆಗೆ ಬೀಳಿಸಿಕೊಂಡು ಹೋಟೆಲ್​ಗಳಿಗೆ ಕರೆದುಕೊಂಡು ಹೋಗಿ, ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ಹಣ ದರೋಡೆ ಮಾಡುವುದು, ಬಳಿಕ ಅವರಿಗೆ ಹನಿಟ್ರ್ಯಾಪ್​ ಬೆದರಿಕೆ ಮೂಲಕ ಮತ್ತೆ ಹಣ ಕೀಳುವುದನ್ನೇ ಈ ಮಹಿಳೆ ದಂಧೆ ಮಾಡಿಕೊಂಡಿದ್ದ ಆತಂಕಕಾರಿ ಸಂಗತಿಯೂ ಗೋವಾ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.