ಉಡುಪಿಯ ಡಿಸಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಸಮಿತಿಯೊಂದಿಗೆ ಸ್ವರೂಪಾ ಟಿ.ಕೆ. ಸಭೆ ನಡೆಸಿದರು. ಡಾ. ಬಸವರಾಜ ಹುಬ್ಬಳ್ಳಿ, ಡಾ. ಎಚ್.ಅಶೋಕ್, ಡಾ.ಪ್ರಶಾಂತ್ ಭಟ್, ಡಾ. ಚಿದಾನಂದ ಸಂಜು, ಡಾ. ನಾಗರತ್ನಾ, ಡಾ.ಲತಾ ನಾಯಕ್, ಡಾ. ಜ್ಯೋತ್ಸ್ನಾ ಬಿ.ಕೆ. ಇತರರಿದ್ದರು.
* ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ
* ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆ
ಉಡುಪಿ: ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಲ್ಲದೆ, ಯಾವುದೇ ರೋಗ ಬಂದು ಚಿಕಿತ್ಸೆ ಪಡೆಯುವ ಮೊದಲೇ ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಮಾಜದಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ಕೂಡಲೇ ವೈದ್ಯಕೀಯ ನೆರವು ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಫೆ.24) ಆಯೋಜಿಸಿದ್ದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿ, ಜನಸಾಮಾನ್ಯರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸಲು ಸರ್ಕಾರ ಅನೇಕ ಯೋಜನೆ ಹಾಗೂ ಕಾರ್ಯಕ್ರಮ ಜಾರಿಗೆ ತಂದಿದೆ. ಅವುಗಳನ್ನು ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ವಿವಿಧ ವಿಷಯ ಚರ್ಚೆ
ಕ್ಷಯ ರೋಗಿಗಳ ಪರೀಕ್ಷೆ, ಜಿಲ್ಲೆಯ ರಕ್ತನಿಧಿ ಕೇಂದ್ರಗಳ ಸ್ಥಿತಿಗತಿ, ರಕ್ತದಾನ ಶಿಬಿರ ಆಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಚರ್ಚೆ ಹಾಗೂ ಅನುದಾನ ಬಿಡುಗಡೆ ಆಗಿರುವ ಕುರಿತಂತೆ ಡಿಸಿ ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭಾ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ. ಎಚ್.ಅಶೋಕ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಕೆಎಂಸಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶ್ಯಾಮಲಾ, ನವಜಾತ ಶಿಶು ತಜ್ಞೆ ಡಾ. ಲೆಸ್ಲಿ ಲೂಯಿಸ್, ತಜ್ಞವೈದ್ಯ ಡಾ. ಮುಖ್ಯಪ್ರಾಣ, ಜಿಲ್ಲೆಯ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಗರ್ಭಿಣಿಯ ಸಾವಿನ ತನಿಖೆ ವೈದ್ಯಕೀಯ ಮಂಡಳಿಗೆ
ಜಿಲ್ಲೆಯಲ್ಲಿರುವ ಗರ್ಭಿಣಿಯರಿಗೆ ತಾಯಿ ಕಾರ್ಡ್ ವಿತರಿಸಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ನಡೆಸಬೇಕು. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಹಂತದಲ್ಲಿಯೇ ಸಭೆ ಕರೆದು ಗರ್ಭಿಣಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು. ಅಲ್ಲದೆ, ತಾಯಿ&ಮಗು ಮರಣ ಸಂಖ್ಯೆ ಶೂನ್ಯಕ್ಕಿಳಿಸಬೇಕು. ಹೆರಿಗೆಯ ನಂತರವೂ ತಾಯಿ ಮತ್ತು ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ನೀಡಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ತೆರಳಿ ಆರೈಕೆಯಲ್ಲಿದ್ದಾಗ ಗರ್ಭಿಣಿ ಸಬೀಸ್ತಾ ಬಾನು ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಆ ಪ್ರಕರಣದ ತನಿಖೆಯನ್ನು ವೈದ್ಯಕೀಯ ಮಂಡಳಿಗೆ ಹಸ್ತಾಂತರಿಸುವಂತೆ ಡಿಸಿ ಸ್ವರೂಪಾ ಸೂಚಿಸಿದರು.
ಮಾನಸಿಕ ಅಸ್ವಸ್ಥರು ರಸ್ತೆಯಲ್ಲಿ ಅಲೆದಾಡುತ್ತಿರುವುದು ಕಂಡು ಬಂದರೆ ಸೇವಾ ಮನೋಭಾವದಿಂದ ಅವರನ್ನು ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರಗಳಿಗೆ ಕರೆತಂದು ಸೂಕ್ತ ಚಿಕಿತ್ಸೆ ನೀಡಿ, ಅವರ ಕುಟುಂಬದವರಿಗೆ ತಲುಪಿಸುವ ಕಾರ್ಯ ಮಾಡಬೇಕು. ಇಲ್ಲಿನ ದೂ.ಸಂ. 7795978883ರ ಕುರಿತು ಪ್ರಚಾರ ಪಡಿಸಬೇಕು. ಸಾರ್ವಜನಿಕರೂ ಸಹ ಈ ಸಂಖ್ಯೆಗೆ ಮಾಹಿತಿ ನೀಡಬೇಕು.