ಉಡುಪಿಯಲ್ಲಿ ಆಯೋಜಿಸಿದ್ದ ಪ್ರವಾಸೋದ್ಯಮ ಅಭಿವೃದ್ಧಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ವಿಂಧ್ಯಾ ಎನ್​.ಎಂ., ತನ್ಮಯ ಗೋಸ್ವಾಮಿ, ಶುಭಾ ಎಚ್​.ಎಸ್​. ಇತರರು ಇದ್ದರು. 
ಉಡುಪಿ

ಪ್ರವಾಸೋದ್ಯಮ ಪ್ರಚಾರಕ್ಕೆ ಡಿಜಿಟಲ್​ ಸ್ಪರ್ಶ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾಹಿತಿ

* ಸಕ್ರಿಯ ಪಾಲುದಾರರೊಂದಿಗೆ ವಿಶೇಷ ಸಭೆ

ಉಡುಪಿ: ಒನ್​ ಟ್ಯಾಕ್​, ಮಣಿಪಾಲ್​ ಸ್ಕೂಲ್​ ಆಫ್​ ಕಮ್ಯುನಿಕೇಷನ್​, ಉಡುಪಿ ಟೂರಿಸಂ ವತಿಯಿಂದ ಹಾಗೂ ಕ್ರಿಯೇಟರ್ಸ್​ ಲ್ಯಾಬ್​ ಉಡುಪಿ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಜಿಲ್ಲಾಡಳಿತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಎಲ್ಲ ಸಕ್ರಿಯ ಪಾಲುದಾರರ ಜತೆಯಲ್ಲಿ ಶುಕ್ರವಾರ (ಏ.10) ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿ, ಉಡುಪಿಯ ಸಂಸ್ಕೃತಿ, ಪರಂಪರೆ, ಆಹಾರ ಶೈಲಿ, ಧಾರ್ಮಿಕತೆಯ ಬಗ್ಗೆ ರಾಷ್ಟ್ರೀಯ&ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲು ಡಿಜಿಟಲ್​ ಸ್ಪರ್ಶ ನೀಡಲಾಗುವುದು ಎಂದರು.

ಫೋಟೋ, ವಿಡಿಯೋಗೆ ಅವಕಾಶ

ಕ್ರಿಯೇಟರ್ಸ್​ ಲ್ಯಾಬ್​ ಉಡುಪಿ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್​ ಕಂಟೆಂಟ್​ ತಯಾರಿಸುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳು, ಕಂಟೆಂಟ್​ ಕ್ರಿಯೇಟರ್ಸ್​ ​ಪಾಲ್ಗೊಂಡು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಫೋಟೋ ಮತ್ತು ವೀಡಿಯೋ ಹಂಚಿಕೊಳ್ಳಲು ಅವಕಾಶವಿದೆ. ಪ್ರಮುಖವಾಗಿ ಕಾಲೇಜ್​ ಮಟ್ಟದಲ್ಲಿ ಲ್ಯಾಬ್​ ಅಳವಡಿಸಿ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್​.ಎಂ., ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ತನ್ಮಯ ಗೋಸ್ವಾಮಿ, ಮಾಹೆ ಎಂಐಸಿ ನಿರ್ದೇಶಕಿ ಶುಭಾ ಎಚ್​.ಎಸ್​. ಇನ್ನಿತರರು ಪಾಲ್ಗೊಂಡಿದ್ದರು.

ತಿಂಗಳು, ವಾರ್ಷಿಕ ಪ್ರಶಸ್ತಿಯೂ ಇರಲಿದೆ

ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಬಗ್ಗೆ ಅತ್ಯಪೂರ್ವ ಕಥಾವಸ್ತು, ಸಾಂಸತಿಕ ಸಾಕ್ಷ್ಯಚಿತ್ರ, ಫೋಟೋ ಅಥವಾ ವೀಡಿಯೋ ತಯಾರಿಸಿ ನೀಡಬಹುದು. ಅತ್ಯುತ್ತಮ ಗುಣಮಟ್ಟದ ಕಂಟೆಂಟ್​ಗಳಿಗೆ ಬೆಸ್ಟ್​ ವಿಡಿಯೋ, ಬೆಸ್ಟ್​ ಫೋಟೋ ಮತ್ತು ಬೆಸ್ಟ್​ ಸ್ಟೋರಿ ವಿಭಾಗದಲ್ಲಿ ಪ್ರತಿ ತಿಂಗಳೂ ಪ್ರಶಸ್ತಿ ನೀಡಲಾಗುವುದು. ಅಲ್ಲದೆ, ಸ್ಟೋರಿ ಆಫ್​ ದ ಇಯರ್​, ಎಮರ್ಜಿಂಗ್​ ಸ್ಟೋರಿ ಟೆಲ್ಲರ್​ ಹಾಗೂ ಕಲ್ಚರಲ್​ ಡಾಕ್ಯುಮೆಂಟೇಷನ್​ ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ನೀಡಲಾಗುವುದು ಎಂದು ಡಿಸಿ ಸ್ವರೂಪಾ ತಿಳಿಸಿದರು.
"

ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇಲ್ಲಿನ ಬೀಚ್​ಗಳಲ್ಲಿ ಜಲಕ್ರೀಡೆ, ಆಯುರ್ವೇದ ಪ್ರವಾಸೋದ್ಯಮ, ಸ್ಥಳೀಯ ಆಹಾರ ಪದ್ಧತಿ, ಪ್ರಾಕೃತಿಕ ಸ್ಥಳಗಳು, ಧಾರ್ಮಿಕ ಸ್ಥಳಗಳ ಕುರಿತಾಗಿ ದೇಶ-ವಿದೇಶದ ಪ್ರವಾಸಿಗರಿಗೆ ಹೆಚ್ಚು ಪ್ರಚಾರ ನೀಡಬೇಕಿದೆ. ಆಯುರ್ವೇದ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ತರಬೇತಿ ಆಯೋಜಿಸಲಾಗುವುದು. ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ನುರಿತ ಗೈಡ್​ಗಳನ್ನೂ ನಿಯೋಜಿಸಲು ಯೋಜಿಸಲಾಗುತ್ತಿದೆ.