ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ ಮಾತನಾಡಿದರು. ಅಬೀದ್​ ಗದ್ಯಾಳ, ಸುಧಾಕರ್​ ನಾಯಕ್​, ಎಸ್​.ಎಸ್​. ಕಾದ್ರೊಳ್ಳಿ, ರಶ್ಮಿ, ಮಹಾಂತೇಶ್​ ಹಂಗರಗಿ ಇತರರಿದ್ದರು. 
ಉಡುಪಿ

ಬಿಸಿಲು ತಾಪದಿಂದ ರಕ್ಷಿಸಿಕೊಳ್ಳಲು ಯತ್ನಿಸಿ

* ಮುನ್ನೆಚ್ಚರಿಕೆ ವಹಿಸಲು ಜನರಿಗೆ ಡಿಸಿ ಸ್ವರೂಪಾ ಸೂಚನೆ

* ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ಉಡುಪಿ: ಪ್ರಸ್ತುತ ಬೇಸಿಗೆಯಲ್ಲಿ ಬಿಸಿಲಿನ ಪ್ರಖರತೆ ದಿನೇದಿನೆ ಹೆಚ್ಚುತ್ತಿದ್ದು, ತಾಪದ ಪ್ರಖರತೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಆಗುವ ಸಾಧ್ಯತೆ ಇದೆ. ಸಾರ್ವಜನಿಕರು ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡುವ ಅಗತ್ಯ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಏ.7) ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಜನರಿಗೆ ಅರಿವು ಮೂಡಿಸಿ

ವಿಪರೀತ ಸೆಕೆಯಿಂದ ನಿರ್ಜಲೀಕರಣ, ಶಾಖ ಸೆಳೆತ, ಬಳಲಿಕೆ ಮತ್ತು ದೈಹಿಕ ಆಘಾತ ಆಗಬಹುದು. ಇವುಗಳಿಂದ ಜನರು ರಕ್ಷಣೆ ಪಡೆಯಲು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅರಿವು ಉಂಟಾಗುವಂತೆ ಪೋಸ್ಟರ್​, ಬ್ಯಾನರ್​, ಜಿಂಗಲ್ಸ್​ ಮೂಲಕ ಮಾಹಿತಿ ನೀಡಬೇಕು. ತಾಪದಿಂದ ಆಗುವ ಅನಾರೋಗ್ಯ ತಡೆಗಟ್ಟಲು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಒಆರ್​ಎಸ್​ ಸೇರಿದಂತೆ ಅಗತ್ಯ ಔಷಧಗಳ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ

ಮಾರುಕಟ್ಟೆ, ಬಸ್​ ಹಾಗೂ ರೈಲು ನಿಲ್ದಾಣ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೂ ಸಹ ಕುಡಿಯುವ ನೀರು ಪೂರೈಸಬೇಕು. ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೋರ್​ವೆಲ್​ ಹಾಗೂ ಟ್ಯಾಂಕರ್​ಗಳ ಮೂಲಕ ನೀರಿನ ಕೊರತೆ ಇರುವ ಕಡೆಗಳಲ್ಲಿ ಪೂರೈಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಒದಗಿಸಬಾರದು. ಎಲ್ಲ ತಾಲೂಕುಗಳಲ್ಲಿ ಮುಂದಿನ 39 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ ಎಂದು ಡಿಸಿ ಸ್ವರೂಪಾ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಎಎಸ್ಪಿ ಸುಧಾಕರ್​ ನಾಯಕ್​, ಜಿಪಂ ಉಪಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಸಹಾಯಕ ಕಮಿಷನರ್​ ರಶ್ಮಿ, ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

ಅಗ್ನಿ ಸುರಕ್ಷತಾ ಆಡಿಟ್​ ವರದಿ ಎಲ್ಲಿ?

ಬೇಸಿಗೆ ತಾಪ ಹೆಚ್ಚಿರುವುದರಿಂದ ಅಗ್ನಿ ಅವಘಡ ಸಂಭವಿಸಬಹುದು. ಆಸ್ಪತ್ರೆ, ಕೈಗಾರಿಕೆ ಪ್ರದೇಶ, ಜನಸಂದಣಿ ಸ್ಥಳಗಳಲ್ಲಿ ಅಗ್ನಿ ಸುರಕ್ಷತೆಯ ವಿವಿಧ ಅಂಶಗಳ ಮೇಲೆ ಆಗಾಗ ತಪಾಸಣೆ ನಡೆಸಿ. ಅಗ್ನಿ ಅನಾಹುತ ಉಂಟಾದರೆ ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು. ಕಳೆದ ಸಭೆಯಲ್ಲಿ ನಾನು ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್​ ನಡೆಸಿ ವರದಿ ನೀಡುವಂತೆ ತಿಳಿಸಿದ್ದೆ. ಈವರೆಗೂ ನೀಡಿಲ್ಲ. ಎಲ್ಲಿದೆ ವರದಿ? ಕೂಡಲೆ ಆಡಿಟ್​ ನಡೆಸಿ ವರದಿ ನೀಡಬೇಕು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಸ್ವರೂಪಾ ತಾಕೀತು ಮಾಡಿದರು.