ಉಡುಪಿಯ ಡಿಸಿ ಕಚರಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರ ಎಸ್​ಐಆರ್​ ಪಟ್ಟಿಯ ಡಿಜಿಟಲೀಕರಣ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ, ಪ್ರತೀಕ್​ ಬಾಯಲ್​ ಹಾಗೂ ವಿವಿಧ ಅಧಿಕಾರಿಗಳು ಇದ್ದರು.  
ಉಡುಪಿ

ಭರ್ತಿ ಮಾಡಿದ ಎಸ್​ಐಆರ್​ ನಮೂನೆ ಹಿಂತಿರುಗಿಸಿ

* ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಡಿಸಿ ಸ್ವರೂಪಾ ಕರೆ

* ಡಿಜಿಟಲೀಕರಣ ಕಾರ್ಯದ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತಲುಪಿಸಲಾಗಿರುವ ನಮೂನೆಗಳಲ್ಲಿ ಎಲ್ಲ ವಿವರ ಪರಿಶೀಲಿಸಿ ತಪ್ಪಿಲ್ಲದಂತೆ ಸೂಕ್ತ ಮಾಹಿತಿ ಭರ್ತಿ ಮಾಡಬೇಕು. ಆ ನಮೂನೆಗಳನ್ನು ತಮ್ಮ ವ್ಯಾಪ್ತಿಯ ಬೂತ್​ ಮಟ್ಟದ ಅಧಿಕಾರಿ (ಬಿಎಲ್​ಒ)ಗಳಿಗೆ ಹಿಂತಿರುಗಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿಯಲ್ಲಿ ಭಾನುವಾರ ಆಯೋಜಿಸಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರ ಎಸ್​ಐಆರ್​ ಪಟ್ಟಿಯ ಡಿಜಿಟಲೀಕರಣ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಆಗಸ್ಟ್​ 8ರ ವರೆಗೆ ಅವಕಾಶ

ಜಿಲ್ಲೆಯಲ್ಲಿ ಎಸ್​ಐಆರ್​ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದೆ. ಈವರೆಗೆ ಜಿಲ್ಲಾದ್ಯಂತ ಶೇ.100ರಷ್ಟು ಎನ್ಯುಮರೇಷನ್​ ನಮೂನೆ ವಿತರಿಸಲಾಗಿದೆ. ಮನೆಮನೆಗೆ ತೆರಳಿ ನೀಡಿರುವ ಎನ್ಯುಮರೇಷನ್​ ನಮೂನೆಗಳಲ್ಲಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆಗಸ್ಟ್​ 8ರ ವರೆಗೆ ನಡೆಯಲಿದೆ. ಇದುವರೆಗೂ ನಮೂನೆ ಭರ್ತಿ ಮಾಡದ ನಾಗರಿಕರು ಕೂಡಲೇ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್​ಒಗಳಿಗೆ ನೀಡಬೇಕು ಎಂದು ತಿಳಿಸಿದರು.

ಗೊಂದಲ ಬೇಡ

ನಮೂನೆ ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲಗಳಿದ್ದರೆ ಸಮೀಪದ ಬಿಎಲ್​ಒ ಫೆಸಿಲಿಟೇಷನ್​ ಸೆಂಟರ್​ ಅಥವಾ ವೋಟರ್​ ಫೆಸಿಲಿಟೇಷನ್​ ಸೆಂಟರ್​ಗೆ ಭೇಟಿ ಮಾಡಿದರೆ ಅಲ್ಲಿನ ಸಿಬ್ಬಂದಿ ನಮೂನೆ ಭರ್ತಿ ಮಾಡುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಮಾಹಿತಿಗಾಗಿ ಜಿಲ್ಲಾಡಳಿತದ ಅಧಿಕೃತ ವೆಬ್​ಸೈಟ್​ https://udupi.nic.in/en/special-intensive-revision-2026 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ  ಅಬೀದ್​ ಗದ್ಯಾಳ್​, ಜಿಪಂ ಸಿಇಒ ಪ್ರತೀಕ್​ ಬಾಯಲ್, ಎಲ್ಲ ಸೆಕ್ಟರ್​ ಅಧಿಕಾರಿಗಳು, ಬೂತ್​ ಮಟ್ಟದ ಅಧಿಕಾರಿಗಳು ಹಾಗೂ ಬಿಎಲ್ಒ ಮೇಲ್ವಿಚಾರಕರು ಪಾಲ್ಗೊಂಡಿದ್ದರು.
"

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಬಿಎಲ್​ಒಗಳ ಮೇಲೆ ಸೆಕ್ಟರ್​ ಅಧಿಕಾರಿಗಳು ಮತ್ತು ಬಿಎಲ್​ಒ ಮೇಲ್ವಿಚಾರಕರು ವಿಶೇಷ ಗಮನಹರಿಸಬೇಕು. ಅಲ್ಲದೆ, ಡಿಜಿಟಲೀಕರಣ ಕಾರ್ಯಕ್ಕೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇದ್ದಲ್ಲಿ ಕೂಡಲೇ ನೇಮಕ ಮಾಡಿಕೊಂಡು ಪ್ರಗತಿ ಸಾಧಿಸಬೇಕು.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.