ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ನಮಸ್ತೆ ಕಲೆಕ್ಟರ್ ಕಾರ್ಯಕ್ರಮದಲ್ಲಿ ಉದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.  
ಉಡುಪಿ

ಆಟದ ಮೈದಾನ ಬೇಡಿಕೆಗೆ ಸ್ಪಂದಿಸಿದ ಡಿಸಿ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶಾಲಾ ಮೈದಾನ ಜಲಾವೃತವಾಗುತ್ತಿರುವುದರಿಂದ ಕ್ರೀಡಾಚಟುಟಿಕೆಗಳಿಗೆ ಅಡಚಣೆಯುಂಟಾಗುತ್ತಿದೆ ಎಂಬ ವಿದ್ಯಾರ್ಥಿಗಳ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮೈದಾನದ ಸ್ಥಿತಿಗತಿಯ ಅಧ್ಯಯನ ನಡೆಸಿ ಶೀಘ್ರವೇ ಸಮಸ್ಯೆ ಪರಿಹರಿಸುವಂತೆ ಕ್ರೀಡಾಮಂಡಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ತ್ವರಿತ ಸ್ಪಂದನೆ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿತು.
ಉದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳು ‘ನಮಸ್ತೆ ಕಲೆಕ್ಟರ್’ ಕಾರ್ಯಕ್ರಮದನ್ವಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರೊಂದಿಗೆ ಸಂವಾದ ನಡೆಸಿ ಅಹವಾಲುಗಳನ್ನು ಮುಂದಿಟ್ಟರು.
ಶಾಲಾ ಮೈದಾನದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿ, ಮೈದಾನ ನವೀಕರಿಸಿ ಶೀಘ್ರ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸ್ಪೋರ್ಟ್ಸ್ ಫೌಂಡೇಶನ್ ಕೇರಳಕ್ಕೆ ಜವಾಬ್ದಾರಿ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಶಾಲೆಯಲ್ಲಿ ಸೈಕಲ್‌ಗಳನ್ನು ಇಡಲು ಶೆಡ್ ನಿರ್ಮಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಮಾಡಿದರು. ಮೈದಾನದ ಸಮೀಪದಲ್ಲಿರುವ ಪಂಚಾಯಿತಿ ಭೂಮಿಯನ್ನು ಹಂಚಿಕೆ ಮಾಡಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಸೈಕಲ್ ಶೆಡ್ ನಿರ್ಮಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಯುವಪೀಳಿಗೆಯನ್ನು ವ್ಯಸನದಿಂದ ಮುಕ್ತಗೊಳಿಸಲು ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಕ್ರಮ, ಎಂಡೋಸಲ್ಫಾನ್ ಸಮಸ್ಯೆ ಇರುವ ಕಾಸರಗೋಡಿನಲ್ಲಿ ರಾಸಾಯನಿಕ ಕೀಟನಾಶಕಗಳ ನಿಯಂತ್ರಣ ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ ಮುಂತಾದ ಪ್ರಶ್ನೆಗಳಿಗೆ ಮಕ್ಕಳು ಜಿಲ್ಲಾಧಿಕಾರಿಯಿಂದ ಉತ್ತರ ಪಡೆದುಕೊಂಡರು.
ಉದಿನೂರು ಶಾಲೆಯ ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಮತ್ತು ಜಿಲ್ಲಾಡಳಿತದ ನಡುವಿನ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ’ನಮಸ್ತೆ ಕಲೆಕ್ಟರ್’ ಅಭಿಯಾನ ಆರಂಭಿಸಿದೆ.