ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಆರೋಪಿ ಅನುಜ್ ಪಾಟೀಲ್.
ಪೊಲೀಸರ ಗನ್ ಕಸಿದು ಗುಂಡು ಹಾರಿಸಿದ ಆಸಾಮಿ
* ಸಿಬ್ಬಂದಿ ಜೀವ ರಕ್ಷಣೆಗೆ ಫೈಯರ್ ಮಾಡಿದ ಪಿಎಸ್ಐ ನಂಜ ನಾಯಕ್
ಉಡುಪಿ: ಕಾಪು ತಾಲೂಕು ಮುದರಂಗಡಿಯಲ್ಲಿ ಆ.7ರಂದು ಮಧ್ಯಾಹ್ನ 3:45ರ ವೇಳೆಯಲ್ಲಿ ನಡೆದಿದ್ದ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿಯ ಕಾಲಿಗೆ ತನಿಖಾ ನಿರತ ಪೊಲೀಸರು ಸೋಮವಾರ (ಆ.24) ಬೆಳಗ್ಗೆ ಗುಂಡೇಟು ಹೊಡೆದಿದ್ದಾರೆ.
ಬಿಹಾರ ರಾಜ್ಯ ನಳಂದ ಜಿಲ್ಲಾ ಸಾರ್ಮರ್ ಮೂಲದ ಮುಂಬೈನ ನಟೋರಿಯಸ್ ಗ್ಯಾಂಗ್ ಸ್ಟರ್ ಅನುಜ್ ಕಮಲೇಶ್ವರ್ ಪಾಟೀಲ್ (35) ಎಂಬಾತನ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಗಾಯಾಳು ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ತನಿಖೆ ಮುಂದುವರಿಸಿದ್ದ ಉಡುಪಿ ಪೊಲೀಸರು, ಈಗಾಗಲೇ ಬಂಧನಕ್ಕೊಳಪಟ್ಟ ಆರೋಪಿಗಳು ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಅನುಜ್ ಪಾಟೀಲ್ನನ್ನು ಬಂಧಿಸಿ ಉಡುಪಿಗೆ ಕರೆತರುತ್ತಿದ್ದರು. ಈತನು ಡೇವಿಡ್ ಹತ್ಯೆಗೆ ಮೂವರು ಸುಪಾರಿ ಕಿಲ್ಲರ್ಸ್ಗಳನ್ನು ಕಳುಹಿಸಿದ್ದ ಎಂದು ತಿಳಿದುಬಂದಿದೆ.
ಹೆಬ್ರಿಯಲ್ಲಿ ಗುಂಡೇಟು
ಪ್ರಕರಣದ ತನಿಖೆ ನಡೆಸುತ್ತಿದ್ದ ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ನಂಜ ನಾಯಕ್, ಕೊಲ್ಲೂರು ಠಾಣೆಯ ಪಿಎಸ್ಐ ವಿನಯ್ ಹಾಗೂ ಸಿಬ್ಬಂದಿ ಆರೋಪಿ ಅನುಜ್ನನ್ನು ಕರೆತರುತ್ತಿದ್ದರು. ಸೋಮವಾರ ಬೆಳಗ್ಗೆ 6:30ರ ವೇಳೆಯಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಚೆಕ್ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಅನುಜ್, ಕೊಲ್ಲೂರು ಪಿಎಸ್ಐ ವಿನಯ್ ಅವರ ಬಳಿ ಇದ್ದ ಗನ್ ಕಸಿದು ಫೈಯರ್ ಮಾಡಿದ್ದಾನೆ. ಈ ಸಮಯದಲ್ಲಿ ಪಿಎಸ್ಐ ನಂಜ ನಾಯಕ್ ಅವರು ಸ್ವಯಂ ಆತ್ಮರಕ್ಷಣೆ ಹಾಗೂ ಇನ್ನಿತರ ಸಿಬ್ಬಂದಿಯ ಜೀವರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ತನ್ನ ಇಲಾಖೆಯ ಗನ್ನಿಂದ ಫೈಯರ್ ಮಾಡಿದ್ದಾರೆ.
ಅನುಜ್ ಮೇಲಿದೆ 11 ಪ್ರಕರಣ
ಆರೋಪಿ ಅನುಜ್ ಮುಂಬೈಯಲ್ಲಿ ಕಾರ್ಯಾಚರಿಸುತ್ತಿದ್ದು 2017ರಿಂದ ತಲೆಮರಿಸಿಕೊಂಡಿದ್ದನು. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ ಎಂಸಿಒಸಿಎ ಕಾಯ್ದೆ ದಾಖಲಾಗಿದೆ. ಈವರೆಗೆ ಒಟ್ಟು 11 ಪ್ರಕರಣವಿದೆ. ಇದರಲ್ಲಿ 10 ಪ್ರಕರಣವು ಎಆರ್ಎಂಎಸ್ ಕಾಯ್ದೆಗೆ ಸಂಬಂಧಿಸಿದೆ. ಮಹಾರಾಷ್ಟ್ರದಲ್ಲಿ 4, ಗುಜರಾತ್ನಲ್ಲಿ 5, ದಮನ್ ಆ್ಯಂಡ್ ಡಿಯು ಹಾಗೂ ಕರ್ನಾಟಕದಲ್ಲಿ ತಲಾ 1 ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಡೇವಿಡ್ ಡಿಸೋಜ ಅವರ ಹತ್ಯೆಗೆ ಸಂಬಂಧಿಸಿ ಈವರೆಗೆ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಅನ್ಯ ರಾಜ್ಯಗಳ ಅನ್ಮೋಲ್ ರಸ್ತೋಗಿ, ಜಿಯಾಹುಲ್ ವಾಜುಲ್ ಶೇಖ್ ಹಾಗೂ ಡಿಸೋಜ ತಲೆಗೆ ಗುಂಡು ಹಾರಿಸಿದ್ದ ರಾಜು ಎಂಬವರನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದರು. ಇವರಲ್ಲಿ ರಾಜು ಎಂಬಾತನ ಕಾಲಿಗೆ ಬೈಂದೂರಿನಲ್ಲಿ ಪೊಲೀಸರು ಗುಂಡೇಟು ಹೊಡೆದಿದ್ದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ.
ಹತ್ಯೆಗೆ ಒಳಸಂಚು ರೂಪಿಸಿ ಹಣಕಾಸು ಸಹಕಾರ ನೀಡಿದ್ದ ಕಾಪು ತಾಲೂಕಿನ ಬಡಾ ಎಮಾರ್ಳ್ ಗ್ರಾಮದ ಅದಮಾರು ನಿವಾಸಿ ಸದಾನಂದ್ ಎಚ್. ದೇವಾಡಿಗ, ಬಡಾ ಗ್ರಾಮದ ಕಿಶೋರ್ ರಾಮ ಪೂಜಾರಿ, ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಕೃತ್ಯಕ್ಕೆ ಬೈಕ್ ಒದಗಿಸಿ ಒಳಸಂಚು ನಡೆಸಿದ್ದ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಬಾಳಿಹಿತ್ಲುವಿನ ನಿವಾಸಿ ಲೋಕೇಶ್ ತೇಜ ಕೊಠಾರಿ ಇವರನ್ನು ಈಗಾಗಲೇ ಬಂಧಿಸಲಾಗಿದೆ.