ಉಡುಪಿ ಪೊಲೀಸ್ ಬಂಧನದಲ್ಲಿರುವ ಸುಪಾರಿ ಕಿಲ್ಲರ್ಸ್
* ಮುದರಂಗಡಿಯಲ್ಲಿ ಡೇವಿಡ್ ಡಿಸೋಜ ಹತ್ಯೆ ಪ್ರಕರಣ
ಉಡುಪಿ: ಕಾಪು ತಾಲೂಕು ಮುದರಂಗಡಿಯಲ್ಲಿ ಆ.7ರಂದು ನಡೆದಿದ್ದ ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಇಬ್ಬರು ಆರೋಪಿಗಳನ್ನು 10 ದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಆರೋಪಿಗಳಾದ ಮೂವರು ಸುಪಾರಿ ಕಿಲ್ಲರ್ಸ್ಗಳನ್ನು ಪೊಲೀಸರು ಅದೇ ದಿನ ರಾತ್ರಿ ಬಂಧಿಸಿದ್ದರು. ಬಂಧಿಸಲ್ಪಟ್ಟ ಮೂವರೂ ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದರು. ಪ್ರಮುಖ ಆರೋಪಿ ಉತ್ತರ ಪ್ರದೇಶದ ಥಾಣಾ ಪಿಲ್ವದ ರಾಜು (42), ಉತ್ತರಾಖಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್ (23), ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್ (38) ಎಂಬವರನ್ನು ಬಂಧಿಸಿದ್ದರು.
ಪ್ರಮುಖ ಆರೋಪಿ ರಾಜು ಕಾಲಿಗೆ ಗುಂಡೇಟು ಹೊಡೆದಿದ್ದರಿಂದ ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ (ಆ.10) ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಅವರಿಬ್ಬರನ್ನು 10 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಸುಪಾರಿ ಕಿಲ್ಲರ್ಸ್ ಮೂಲಕ ಡೇವಿಡ್ ಡಿಸೋಜ ಅವರನ್ನು ಹತ್ಯೆ ಮಾಡಿಸಿದ ಶಂಕಿತ ವ್ಯಕ್ತಿಯ ಬಂಧನಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಟೀಮ್ ಉತ್ತರ ಪ್ರದೇಶಕ್ಕೆ ಎರಡು ದಿನದ ಹಿಂದೆಯೇ ತೆರಳಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.