ಉಡುಪಿ: ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿ ಡೇವಿಡ್ ಡಿಸೋಜಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃತ್ಯಕ್ಕೆ ಬೈಕ್ ಒದಗಿಸಿ ಅಪರಾಧಿಕ ಒಳಸಂಚು ನಡೆಸಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಕಾರ್ಕಳ&ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಬಾಳಿಹಿತ್ಲು ಹುದಾರ ಹೌಸ್ ನಿವಾಸಿ ಲೋಕೇಶ್ ತೇಜ ಕೊಠಾರಿ (42) ಎಂದು ಗುರುತಿಸಲಾಗಿದೆ.
ಆರೋಪಿ ಲೋಕೇಶ್ ತೇಜ ಈ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ, ಈ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿ ಪರಿಚಯವಾಗಿ ಸ್ನೇಹಿತರಾಗಿದ್ದರು. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ರಾಜು ಎಂಬವರಿಗೆ ಲೋಕೇಶ್ ಬೈಕ್ ಒದಗಿಸಿದ್ದಲ್ಲದೆ, ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಸಂಚು ರೂಪಿಸಿದ್ದನು. ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ ಹಾಗೂ ಪಡುಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಂದೂರಿನ ಯಡ್ತರೆ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಪೊಲೀಸರು ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ಗಳು ಹಾಗೂ ಬೈಕ್ನ ಇಂಜಿನ್ ಮತ್ತು ಚಾಸೀಸ್ ಸಂಖ್ಯೆಯನ್ನು ಅಳಿಸಲು ಬಳಸುತ್ತಿದ್ದ ಮಿಷಿನ್ ವಶಪಡಿಸಿಕೊಂಡಿದ್ದಾರೆ.