ಪೆರ್ಲ-ಸ್ವರ್ಗ ರಸ್ತೆಯ ಕನ್ನಟಿಕಾನದಲ್ಲಿ ಒಣಗಿ ನಿಂತಿರುವ ಬೃಹತ್ ಮರ ಅಪಾಯ ಆಹ್ವಾನಿಸುತ್ತಿದೆ. 
ಉಡುಪಿ

ಪೆರ್ಲ ರಸ್ತೆ ಇಕ್ಕೆಲಗಳಲ್ಲಿ ಅಪಾಯಕಾರಿ ಮರಗಳು

ಕಾಸರಗೋಡು: ಎಣ್ಮಕಜೆ ಪಂಚಾಯಿತಿ ಪೆರ್ಲದಿಂದ ಕನ್ನಟಿಕಾನ-ಸ್ವರ್ಗ ಹಾದಿಯಾಗಿ ಪುತ್ತೂರು ಸಂಪರ್ಕಿಸುವ ಪೆರ್ಲ-ಸೂರಂಬೈಲ್ ರಸ್ತೆ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಈ ಮಧ್ಯೆ ರಸ್ತೆಯ ಎರಡೂ ಬದಿ ಒಣಗಿ ನಿಂತಿರುವ ಮರಗಳು ಭಾರಿ ಗಾಳಿ-ಮಳೆಗೆ ಬೀಳುವ ಆತಂಕ ಜನರನ್ನು ಕಾಡುತ್ತಿದೆ. ಪೆರ್ಲ ಸಮೀಪದ ಕನ್ನಟಿಕಾನದಲ್ಲಿ ರಸ್ತೆ ಅಂಚಿನಲ್ಲಿರುವ ಒಣಗಿದ ಬೃಹತ್ ಮರಗಳು ಯಾವುದೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿವೆ.
ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಇದೇ ರಸ್ತೆಯಾಗಿ ಸಂಚರಿಸುತ್ತಾರೆ. ಅನೇಕ ಮಂದಿ ಬಸ್ಸಿಗಾಗಿ ಇಲ್ಲೇ ಕಾದು ನಿಲ್ಲುತ್ತಾರೆ. ಅಪಾಯಕಾರಿಯಾಗಿರುವ ಮರಗಳ ರೆಂಬೆ ತೆರವುಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಇಲ್ಲ. ವಿದ್ಯುತ್ ತಂತಿಯೂ ಹಾದುಹೋಗಿದ್ದು ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ರಸ್ತೆಗಳ ಸಮೀಪದ ಮರ ತೆರವುಗೊಳಿಸಬೇಕಾದರೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಪ್ರತ್ಯೇಕ ಅನುಮತಿ ಪಡೆಯಬೇಕು. ಎರಡೂ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ಇಂತಹ ಅಪಾಯಕಾರಿ ಮರಗಳನ್ನು ತೆರವು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಈ ರಸ್ತೆಯ ಎರಡೂ ಬದಿ ಇಂಥ ಹಲವಾರು ಅಪಾಯಕಾರಿ ಮರಗಳಿದ್ದು, ಯಾವುದೇ ಸಮಯದಲ್ಲಿ ಬುಡಸಮೇತ ಮುರಿದು ಬೀಳುವ ಸ್ಥಿತಿಯಲ್ಲಿವೆ. ಪೆರ್ಲ-ಪಾಣಾಜೆ-ಪುತ್ತೂರು ಮಧ್ಯೆ ಹಲವು ಬಸ್‌ಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುವುದರಿಂದ ಅಪಾಯ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಪಾಯಕಾರಿ ಒಣಗಿದ ಮರ ತೆರವುಗೊಳಿಸುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಜನರ ಜೀವಕ್ಕೆ ಹಾನಿಯಾಗಬಲ್ಲ ಮರ ತೆರವುಗೊಳಿಸುವ ಬಗ್ಗೆ ಗ್ರಾಪಂ ಅಧಿಕಾರಿಗಳೂ ಗಮನಹರಿಸಬೇಕಾಗಿದೆ.

— ಅಜಿತ್, ಸ್ಥಳೀಯ ನಿವಾಸಿ