ತಿರುವೈಲು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಗುಂಡಿ
ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ’ ಇಲಾಖೆಗಳ ನಡುವಿನ ಜಗಳದಿಂದ ತಿರುವೈಲು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಗುಂಡಿ ಸಾರ್ವಜನಿಕರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕುಡ್ಸೆಂಪ್ ಸಂಸ್ಥೆಗಳು ಪರಸ್ಪರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆಯ ಹಿನ್ನೆಲೆ
ತಿರುವೈಲು ಸರ್ಕಾರಿ ಶಾಲೆ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿರುವ ಬೃಹತ್ ಗುಂಡಿ ಬಗ್ಗೆ ಜನವರಿ ಕೊನೆಯ ವಾರದಲ್ಲಿ ‘ವಿಜಯವಾಣಿ’ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಸಂಸ್ಥೆಯು ರಸ್ತೆ ದುರಸ್ತಿ ಮಾಡಿ ಡಾಂಬರು ಹಾಕಿದ್ದರೂ, ಗುಂಡಿಯನ್ನು ಮುಚ್ಚದೆ ಅಥವಾ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸದೆ ನಿರ್ಲಕ್ಷ್ಯ ತೋರಿದೆ. ಇದು ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎಂಬಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹದಗೆಟ್ಟಿದೆ ಒಳಚರಂಡಿ ವ್ಯವಸ್ಥೆ
ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಈ ಹಿಂದೆ ಇದ್ದ ಒಳಚರಂಡಿ ವ್ಯವಸ್ಥೆ ಬಂದ್ ಆಗಿದೆ. ಇದರಿಂದಾಗಿ ಅಮೃತನಗರ ಮತ್ತು ವಾಮಂಜೂರು ಚೆಕ್‌ಪೋಸ್ಟ್ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಈ ಗುಂಡಿಯಲ್ಲಿ ಶೇಖರಣೆಯಾಗುತ್ತಿದೆ.
ಅಪಘಾತದ ಭೀತಿ
ರಸ್ತೆಯು ಹೆದ್ದಾರಿಯತ್ತ ಇಳಿಜಾರಾಗಿದ್ದು, ವಾಹನ ಸವಾರರಿಗೆ ಈ ಗುಂಡಿ ಗೋಚರಿಸದೆ ಅಪಾಯ ಉಂಟಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಈಗಾಗಲೇ ಹಲವು ದ್ವಿಚಕ್ರ ವಾಹನಗಳು ಇಲ್ಲಿ ಬಿದ್ದು ಸಣ್ಣಪುಟ್ಟ ಅಪಘಾತಗಳಾಗಿವೆ.
ಆರೋಗ್ಯದ ಮೇಲೆ ಪರಿಣಾಮ
ಸಂಜೆಯಾಗುತ್ತಲೇ ಕೊಳಚೆ ನೀರಿನ ಪ್ರಮಾಣ ಹೆಚ್ಚಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ವಿಪರೀತ ದುರ್ವಾಸನೆ ಹರಡುತ್ತಿದ್ದು, ಸೊಳ್ಳೆಗಳ ಕಾಟದಿಂದ ಸ್ಥಳೀಯ ನಿವಾಸಿಗಳ ಆರೋಗ್ಯಕ್ಕೆ ಸಂಚಕಾರ ಬಂದಿದೆ.
ಸ್ಮಾರ್ಟ್‌ಸಿಟಿಗೆ ಕನ್ನಡಿ
ಮಂಗಳೂರು ಸ್ಮಾರ್ಟ್‌ಸಿಟಿ ಎಂದೆಲ್ಲ ಹೇಳಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ಜಿಲ್ಲಾಡಳಿತಕ್ಕೆ, ಮನಪಾ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಯೊಂದರ ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ತಿರುವೈಲು ರಸ್ತೆ ಬದಿಯ ಗುಂಡಿಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗದೆ ಹೋಗಿರುವುದು ಆಡಳಿತಕ್ಕೆ ಹಿಡಿದ ಕನ್ನಡಿಯಂತಿದೆೆ.
ಹೆದ್ದಾರಿ ವಿಸ್ತರಣೆ ವೇಳೆ ಒಳಚರಂಡಿ ದುರಸ್ತಿ ಮಾಡುವುದಾಗಿ ಎನ್‌ಎಚ್ ಇಲಾಖೆ ಭರವಸೆ ನೀಡಿತ್ತು. ಈಗ ರಸ್ತೆಗೆ ಡಾಂಬರು ಹಾಕಿ ಕೈತೊಳೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಇಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ.
ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಹೋಗುವ ದಾರಿ ಮುಚ್ಚಿಹೋಗಿದೆ. ದುರ್ವಾಸನೆಯಿಂದ ವ್ಯಾಪಾರ ಮಾಡುವುದು ಕಷ್ಟವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಇಲ್ಲಿ ಹೊಸ ಒಳಚರಂಡಿ ವ್ಯವಸ್ಥೆಯಾಗಬೇಕು.
ಇದು ಜನರ ಆರೋಗ್ಯ ಕೆಡಿಸುವ ಗುಂಡಿಯಾಗಿ ಮಾರ್ಪಟ್ಟಿದೆ. ಕೊಳಚೆ ನೀರು ಹರಿದು ಹೋಗಲು ರಸ್ತೆ ಪಕ್ಕದಲ್ಲಿ ಹೊಸದಾಗಿ ಒಳಚರಂಡಿ ನಿರ್ಮಿಸಬೇಕು.