ಅಮೃತ್ ಪೈಪ್‌ಲೈನ್‌ನಿಂದ ರಾಜ್ಯ ಹೆದ್ದಾರಿಯುದ್ದಕ್ಕೂ ಅಪಾಯಕಾರಿ ಹೊಂಡಗಳು.  
ಉಡುಪಿ

ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ಹೊಂಡ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಗೋಳಿಗೆ ಹೋಗುವ ಬದಿಯಲ್ಲಿ ತಿಂಗಳ ಹಿಂದೆ ಅಮೃತ್ 2.0 ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆದಿದೆ. ಪೈಪ್‌ಲೈನ್‌ಗೆ ರಸ್ತೆ ಅಗೆದು ಬಳಿಕ ರಸ್ತೆ ಸರಿಪಡಿಸದೆ ಕೇವಲ ಮಣ್ಣು ತುಂಬಿ ಬಿಟ್ಟ ಪರಿಣಾಮ ಹೆದ್ದಾರಿಯಲ್ಲಿ ಉಂಟಾಗಿರುವ ಹೊಂಡಗಳಿಂದ ಅಪಘಾತಗಳು ಉಂಟಾಗುತ್ತಿವೆ.
ರಾಜ್ಯ ಹೆದ್ದಾರಿ ಹಾದು ಹೋಗುವ ಕಾರ್ನಾಡು, ಕುಬೆವೂರು, ಕೆಂಚನಕೆರೆ, ಕೆರೆಕಾಡು, ಪದ್ಮನೂರು ಬಳಿ ಪೈಪ್‌ಲೈನ್ ಹಾಕಲು ಹೆದ್ದಾರಿ ಅಗೆತ ಮಾಡಿದ್ದು, ಹೊಂಡ ಸರಿಯಾಗಿ ಮುಚ್ಚದೆ ಇರುವುದು ಮಾತ್ರವಲ್ಲ, ಪೈಪ್ ಹಾದು ಹೋಗಲು ರಸ್ತೆ ತುಂಡರಿಸಿ ಅಗೆತ ಮಾಡಿದ ಪ್ರದೇಶಕ್ಕೆ ಹಾಕಿದ ಮಣ್ಣು, ಜಲ್ಲಿಪುಡಿ ಒಂದೇ ಮಳೆಗೆ ಕಿತ್ತು ಹೋಗಿ ಬೃಹದಾಕಾರದ ಹೊಂಡಗಳು ಉಂಟಾಗಿವೆ.
ಅಪಾಯಕಾರಿ ಹೊಂಡಗಳಿಂದ ಅನೇಕ ಅಪಘಾತಗಳು ಸಂಭವಿಸಿವೆ. ರಸ್ತೆ ನಡುವಿನ ಹೊಂಡಕ್ಕೆ ವಾಹನಗಳು ಬಿದ್ದ ಪರಿಣಾಮ ಸವಾರರಿಗೆ ಬೆನ್ನು ಮೂಳೆಗೆ ಏಟಾಗಿದೆ. ಅನೇಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪೈಪ್‌ಲೈನ್ ಗುತ್ತಿಗೆದಾರರಿಗೆ, ಸಂಬಂಧಪಟ್ಟ ಆಡಳಿತಕ್ಕೆ ಮನವಿ ಮಾಡಿದರೂ ಜನರ ದೂರಿಗೆ ಬೆಲೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವು ಅಪಾಯಕಾರಿಯಾಗಿದ್ದು ಹೆದ್ದಾರಿ ನಡುವಿನಲ್ಲಿ ಪೈಪ್‌ಲೈನ್ ಹಾಕಲು ಅಗೆತ ಮಾಡಿ ಭಾರಿ ಗಾತ್ರದ ಹೊಂಡಗಳು ಉಂಟಾಗಿವೆ. ಕೆಲ ದಿನದ ಹಿಂದೆ ರಾತ್ರಿ ಹೊತ್ತಿನಲ್ಲಿ ಹೊಂಡ ತಪ್ಪಿಸಲು ಯತ್ನಿಸಿ ಕಾರು, ಲಾರಿ ನಡುವೆ ಅಪಘಾತ ಸಂಭವಿಸಿದ್ದು ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದರು. ಈ ಭಾಗದಲ್ಲಿ ದಾರಿ ದೀಪದ ಅವ್ಯವಸ್ಥೆ ಕೂಡ ಕಾಡುತ್ತಿದೆ. ಬೇಸಿಗೆಯ ಸಂದರ್ಭ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭದಿಂದಲೇ ಕುಂಟುತ್ತಿದೆ. ಇದನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೇಸಿಗೆಯಲ್ಲಿ ಧೂಳು ಬಳಿಕ ಮಳೆಯಲ್ಲಿ ಹೊಂಡ-ಗುಂಡಿಗಳ ಸಮಸ್ಯೆಯಿಂದ ಜನ ಸಾಮಾನ್ಯರು ಹೈರಾಣಾಗಿದ್ದು, ಇಲಾಖೆಯ ಇಂಜಿನಿಯರ್‌ಗಳ ಅವೈಜ್ಞಾನಿಕ ಯೋಚನೆಯಿಂದ ಬಹಳಷ್ಟು ಸಮಸ್ಯೆಗಳಾಗುತ್ತಿದೆ. ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು.

— ಶ್ರೀಕಾಂತ ಕೆರೆಕಾಡು ಸ್ಥಳೀಯರು

ಹೆದ್ದಾರಿ ಹೊಂಡಗಳಿಗೆ ಜಲ್ಲಿ ತುಂಬಿಸಿ ಡಾಂಬರು ಹಾಕಿ ಗಟ್ಟಿ ಮಾಡುವುದು ಬಿಟ್ಟು ಜಲ್ಲಿ ಪುಡಿ ಹಾಕಿ ಹೋಗುತ್ತಾರೆ. ರಾತ್ರಿ ಬಂದ ಮಳೆಗೆ ಈ ಜಲ್ಲಿ ಪುಡಿ ಸಂಪೂರ್ಣ ಕೊಚ್ಚಿ ಹೋಗುತ್ತದೆ.

— ನಾರಾಯಣ ಕೆಂಚನಕೆರೆ ಸ್ಥಳೀಯರು