ಉಡುಪಿಯ ಶಿರಬೀಡು ವಾರ್ಡ್ನಲ್ಲಿರುವ ಕಿರಿದಾದ ರಸ್ತೆ ಮಾರ್ಗ.
* ಶಿರಿಬೀಡು ವಾರ್ಡ್ನಲ್ಲಿದೆ ಕಿರಿದಾದ ಮಾರ್ಗ
* ಸುರಕ್ಷತಾ ಕ್ರಮಕ್ಕೆ ಜನರ ಆಗ್ರಹ
ಉಡುಪಿ: ನಗರಸಭಾ ವ್ಯಾಪ್ತಿಯ ವಾರ್ಡೊಂದರಲ್ಲಿ ಜನ ಹಾಗೂ ಬೈಕ್ ಸಂಚಾರಕ್ಕಾಗಿ ಇರುವ ಸಂಪರ್ಕ ಮಾರ್ಗ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿಬಂದಿದೆ.
ಉಡುಪಿ ನಗರದ 34ನೇ ಶಿರಿಬೀಡು ವಾರ್ಡ್ನಲ್ಲಿ ಪುಳಿಮಾರು ಜಂಕ್ಷನ್ನಿಂದ ಪ್ರಗತಿನಗರ ಹಾಗೂ ಹಳೆಯ ಸರ್ಕಾರಿ ಬಸ್ ನಿಲ್ದಾಣವನ್ನು ಸಂಪರ್ಕಿಸುವ ಧೂಮಾವತಿ 2ನೇ ಅಡ್ಡ ರಸ್ತೆಯ ಮಾರ್ಗವು ಅಪಾಯಕಾರಿಯಾಗಿ ಕಾಡುತ್ತಿದೆ.
ಕಿರಿದಾದ ರಸ್ತೆ
ಮಳೆಗಾಲದಲ್ಲಿ ನೀರು ಹರಿಯಲು ನಿರ್ಮಿಸಿರುವ ತೆರೆದ ಕಾಲುವೆ ಇದಾಗಿದ್ದು, ಇಲ್ಲಿಯೇ ಕಿರಿದಾದ ರಸ್ತೆಯೂ ಇದೆ. ಅಂಚಿಗೆ ತಡೆಬೇಲಿ ಇಲ್ಲದ್ದರಿಂದ ಅನೇಕ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಮಳೆಗಾಲದಲ್ಲಿ ಪಾದಚಾರಿಗಳೂ ಸಹ ಆಯತಪ್ಪಿ ಬಿದ್ದು ಕಾಲುವೆ ಪಾಲಾಗುವ ಅಪಾಯವೂ ಇದೆ.
ಉಡುಪಿ ನಗರಸಭೆ ಅಳವಡಿಸಿರುವ ಮಾರ್ಗಸೂಚಕ ಫಲಕ. ಜನ ಸಂಚಾರವೂ ಅಧಿಕ
ಶಿರಬೀಡು ವಾರ್ಡ್ನಲ್ಲಿರುವ ಈ ಕಿರಿದಾದ ರಸ್ತೆಯು ಉಡುಪಿ ನಗರ ಪ್ರವೇಶಿಸಲು ಇರುವ ಸಮೀಪದ ಮಾರ್ಗವಾಗಿದೆ. ಹೀಗಾಗಿ ಸಾರ್ವಜನಿಕರ ಸಂಚಾರ ಈ ರಸ್ತೆಯಲ್ಲಿ ಅಧಿಕವಾಗಿದೆ. ವಲಸೆ ಕಾರ್ಮಿಕರು, ಶಾಲಾ&ಕಾಲೇಜು ವಿದ್ಯಾರ್ಥಿಗಳು, ವೃದ್ಧರೂ ಸಹ ಇಲ್ಲಿಂದಲೇ ನಗರದತ್ತ ಸಂಚರಿಸುತ್ತಾರೆ. ನಗರಾಡಳಿತ ಇತ್ತ ಗಮನ ಹರಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.
ಶಿರಬೀಡು ವಾರ್ಡ್ನಲ್ಲಿರುವ ಈ ರಸ್ತೆಯು ಜನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಹಲವರು ಕಾಲುವೆಗೆ ಬಿದ್ದು ಗಾಯಗೊಂಡ ಕುರಿತು ದೂರುಗಳಿವೆ. ಕಾಲುವೆಗೆ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕಿ ರಸ್ತೆಯನ್ನು ಅಗಲಿಸುವ ಅಥವಾ ತಡೆಬೇಲಿ ಅಳವಡಿಸಲು ನಗರಾಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು.
— ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ.