ಕುಂದಾಪುರ- ಕೊಲ್ಲೂರು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ಮಾವಿನಕಟ್ಟೆ ಪ್ರದೇಶ.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಕುಂದಾಪುರ- ನೇರಳಕಟ್ಟೆ ಮಾತ್ರವಲ್ಲದೆ ಕುಂದಾಪುರ- ಕೊಲ್ಲೂರು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ಮಾವಿನಕಟ್ಟೆ ಪ್ರದೇಶ ಸುಸಜ್ಜಿತ ಸರ್ಕಲ್, ವ್ಯವಸ್ಥಿತ ಬಸ್ ನಿಲ್ದಾಣ ಹಾಗೂ ಮಾರ್ಗಸೂಚಿ ಫಲಕಗಳ ಕೊರತೆಯಿಂದ ಅಪಾಯಕಾರಿ ಜಂಕ್ಷನ್ ಆಗಿ ಮಾರ್ಪಟ್ಟಿದೆ.
ಕುಂದಾಪುರದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ, ಅಜ್ರಿ, ಸೌಕೂರು ಹಾಗೂ ಕೆರಾಡಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಇದಾಗಿದೆ. ಮತ್ತೊಂದೆಡೆ ಗುಲ್ವಾಡಿ, ಬಸ್ರೂರು, ವಂಡ್ಸೆ, ಹಟ್ಟಿಯಂಗಡಿ ಹಾಗೂ ನೆಂಪು ಕಡೆಗೆ ಸಂಚರಿಸುವ ಸಾವಿರಾರು ವಾಹನಗಳು ಪ್ರತಿದಿನ ಈ ಜಂಕ್ಷನ್ ಮೂಲಕವೇ ಸಾಗುತ್ತವೆ. ಆದರೂ ಈ ಜಂಕ್ಷನ್ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ನಿರಂತರ ಅಪಘಾತ
ನಾಲ್ಕು ದಿಕ್ಕಿನ ರಸ್ತೆಗಳು ಸೇರುವ ಈ ಜಂಕ್ಷನ್‌ನಲ್ಲಿ ಈ ಹಿಂದೆ ತಾತ್ಕಾಲಿಕ ಸರ್ಕಲ್ ನಿರ್ಮಿಸಲಾಗಿತ್ತು. ಬಳಿಕ ಬೀದಿ ದೀಪ ಅಳವಡಿಕೆಗಾಗಿ ಅದನ್ನು ತೆರವುಗೊಳಿಸಲಾಗಿದೆ. ಪ್ರಸ್ತುತ ಇರುವ ಕಿರಿದಾದ ವೃತ್ತ ಒಂದೆಡೆ ಏರು ಹಾಗೂ ಮತ್ತೊಂದೆಡೆ ತಗ್ಗಾಗಿರುವುದರಿಂದ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ವರ್ಷದಲ್ಲಿ 10ಕ್ಕೂ ಮಿಕ್ಕಿ ಅಪಘಾತಗಳು ಸಂಭವಿಸಿವೆ. ಜಾಗವನ್ನು ಸಮತಟ್ಟು ಮಾಡಿ ಸುಸಜ್ಜಿತ ಸರ್ಕಲ್ ನಿರ್ಮಿಸಿದರೆ ಸಂಚಾರ ಸುಗಮವಾಗುವುದರ ಜತೆಗೆ ಅಪಘಾತಗಳನ್ನೂ ತಡೆಯಬಹುದು.
ಇದ್ದೂ ಇಲ್ಲದಂತಿದೆ ಬಸ್ ನಿಲ್ದಾಣ
ಜಂಕ್ಷನ್‌ನಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣ ಸಾರ್ವಜನಿಕ ಬಳಕೆಗೆ ಸಮರ್ಪಕವಾಗಿಲ್ಲ. ರಸ್ತೆಗಿಂತ ಬಹಳ ಹಿಂದಕ್ಕೆ ನಿರ್ಮಿಸಿರುವುದರಿಂದ ಬಸ್ ಬರುವುದು ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವುದಿಲ್ಲ. ಪರಿಣಾಮ ಜನರು ರಸ್ತೆ ಬದಿಯಲ್ಲೇ ನಿಂತು ಬಸ್ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ನಿಲ್ದಾಣದಲ್ಲಿ ಧೂಳು ತುಂಬಿಕೊಂಡಿದ್ದು, ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಬಸ್ ನಿಲ್ದಾಣದ ಎದುರಲ್ಲೇ ಕಸ ಸುರಿಯಲಾಗುತ್ತಿದೆ ಎಂಬ ಆರೋಪವೂ ಇದೆ.
ಫಲಕಗಳಿಲ್ಲ
ಪ್ರಮುಖ ಜಂಕ್ಷನ್ ಆಗಿದ್ದು, ವಾಹನ ಸವಾರರಿಗೆ ಊರುಗಳ ಬಗ್ಗೆ ಮಾಹಿತಿ ನೀಡಲು ಫಲಕಗಳು ಅಗತ್ಯ. ಆದರೆ ತಲ್ಲೂರಿನಿಂದ ಕೊಲ್ಲೂರಿಗೆ ತೆರಳುವ ಪ್ರವಾಸಿಗರಿಗೆ ಈ ಜಂಕ್ಷನ್‌ನಲ್ಲಿ ನಿರ್ದಿಷ್ಟ ಮಾರ್ಗಸೂಚಿ ಫಲಕಗಳಿಲ್ಲದೆ ಹತ್ತಿರ ಅಂಗಡಿ, ಆಟೋ ಚಾಲಕರನ್ನು ಕೇಳಿ ತೆರಳುವ ಪರಿಸ್ಥಿತಿ ಎದುರಾಗಿದೆ. ಹಗಲಿನಲ್ಲಿ ಬರುವವರಿಗೆ ಮಾಹಿತಿ ನೀಡಲು ಯಾರದರೊಬ್ಬರು ಸಿಗುತ್ತಾರೆ. ಆದರೆ ರಾತ್ರಿ ವೇಳೆ ವಾಹನ ಸವಾರರು ಪರದಾಡುವ ಪರಿಸ್ಥಿತಿಯಿದೆ ಎಂಬುದು ಸ್ಥಳೀಯರ ಮಾತು.
ರಿಕ್ಷಾ ನಿಲ್ದಾಣಕ್ಕೆ ಪ್ರತ್ಯೇಕ ಸ್ಥಳಕ್ಕೆ ಬೇಡಿಕೆ
ಮಾವಿನಕಟ್ಟೆ ಜಂಕ್ಷನ್‌ನಲ್ಲಿ 30ಕ್ಕೂ ಮಿಕ್ಕಿ ರಿಕ್ಷಾಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಆದರೆ ಇಲ್ಲಿ ವ್ಯವಸ್ಥಿತ ರಿಕ್ಷಾ ನಿಲ್ದಾಣವಿಲ್ಲದೆ ಕೆಲವು ರಿಕ್ಷಾಗಳು ರಸ್ತೆಯಲ್ಲೇ ನಿಲ್ಲುವ ಅನಿವಾರ್ಯ ಪರಿಸ್ಥಿತಿಯಿದೆ. ಇನ್ನು ಕೆಲವು ರಿಕ್ಷಾಗಳು ಜಂಕ್ಷನ್ ಆಸುಪಾಸಿನ ಖಾಲಿ ಜಾಗಗಳಲ್ಲಿ ನಿಲ್ಲಿಸುತ್ತಿದ್ದಾರೆ. ಕೂಡಲೇ ರಿಕ್ಷಾ ಚಾಲಕರಿಗಾಗಿ ವ್ಯವಸ್ಥಿತ ರಿಕ್ಷಾ ನಿಲ್ದಾಣಕ್ಕೆ ಜಾಗ ಗುರುತಿಸಿ, ನಿಲ್ದಾಣ ನಿರ್ಮಿಸಿ ಕೊಡಬೇಕೆಂದು ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.
ಸುಸಜ್ಜಿತ ಸರ್ಕಲ್ ನಿರ್ಮಾಣಕ್ಕೆ 6 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಅನುಮೋದನೆಗೆ ಕಾಯುತ್ತಿದ್ದೇವೆ.
— ಮಹಾಬಲ ನಾಯ್ಕ ಸಹಾಯಕ ಕಾರ್ಯಪಾಲಕ ಅಭಿಯಂತ, ಲೋಕೊಪಯೋಗಿ ಇಲಾಖೆ ಕುಂದಾಪುರ