ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಬೃಹದಾಕಾರದ ಅಪಾಯಕಾರಿ ಮರಗಳು. 
ಉಡುಪಿ

ರಾ.ಹೆದ್ದಾರಿಯಲ್ಲಿ ಅಪಾಯದ ತೂಗುಕತ್ತಿ

ಮನೋಹರ್ ಬಳಂಜ ಬೆಳ್ತಂಗಡಿ
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಮುಂಡಾಜೆ ಗ್ರಾಮದ ಸೀಟು ಪರಿಸರದಲ್ಲಿ ಹಲವು ಮರಗಳು ರಸ್ತೆಗೆ ಬಾಗಿ ನಿಂತಿದ್ದು ಗಾಳಿ-ಮಳೆಗೆ ಉರುಳುವ ಭೀತಿ ಎದುರಾಗಿದೆ. ವಾಹನ ಸವಾರರು, ಪಾದಚಾರಿಗಳು ಜೀವಭಯದಲ್ಲೇ ಸಂಚರಿಸುವಂತಹ ಸ್ಥಿತಿ ಇಲ್ಲಿದೆ.
ಇದಕ್ಕೆ ಉದಾಹರಣೆ ಎಂಬಂತೆ ಮಂಗಳವಾರ ಸುರಿದ ಭಾರಿ ಗಾಳಿ-ಮಳೆಗೆ ಇಲ್ಲಿ ಬೃಹತ್ ಮರವೊಂದು ರಸ್ತೆ ಹಾಗೂ ವಿದ್ಯುತ್ ತಂತಿ ಮೇಲೆ ಮೇಲೆ ಉರುಳಿ ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆ ಸಂದರ್ಭದಲ್ಲಿ ವಾಹನಗಳು ಸಂಚರಿಸದ ಕಾರಣ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಶಾಲಾ ಬಸ್ ಸಹಿತ ಕೆಲವು ದ್ವಿಚಕ್ರ ವಾಹನಗಳು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿವೆ.
25ಕ್ಕೂ ಹೆಚ್ಚು ಅಪಾಯಕಾರಿ ಮರಗಳಿವೆ: ನಿಡಿಗಲ್‌ನಿಂದ ಸೋಮಂತಡ್ಕ ತನಕದ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಅಪಾಯಕಾರಿ ಮರಗಳಿವೆ. ಈ ಪ್ರದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ರಸ್ತೆ ವಿಸ್ತರಣೆಗಾಗಿ ಎರಡು ಬದಿಗಳಲ್ಲಿ ಮರಗಳ ಬುಡ ಭಾಗದವರೆಗೂ ಅಗೆಯಲಾಗಿದೆ. ಕೆಲವು ಮರಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಿಸಲಾಗಿದೆ. ರಸ್ತೆ ವಿಸ್ತರಣೆಗಾಗಿ ಮರಗಳ ಬೇರಿನ ಭಾಗದವರೆಗೂ ಮಣ್ಣು ತೆರವು ಮಾಡಿರುವುದರಿಂದ ಬುಡದಲ್ಲಿ ಮಣ್ಣು ಸಡಿಲಗೊಂಡು ಮರಗಳು ರಸ್ತೆಯತ್ತ ವಾಲಿ ನಿಂತಿವೆ. ಅಲ್ಲದೆ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸಲು, ಮಣ್ಣು ಅಗೆಯಲು ಬೃಹತ್ ಯಂತ್ರೋಪಕರಣಗಳನ್ನು ಬಳಸಲಾಗಿದ್ದು ಇದು ಕೂಡ ಮರಗಳ ಭವಿಷ್ಯಕ್ಕೆ ಮಾರಕವಾಗಿದೆ.

ಮಣ್ಣು ಸವಕಳಿ ಭೀತಿ

ಮಳೆಗೆ ಅರಣ್ಯ ಭಾಗದ ನೀರು ಈ ಮರಗಳ ನಡುವೆಯೇ ಹರಿಯುತ್ತಿದ್ದು ಇನ್ನಷ್ಟು ಮಣ್ಣು ಸವಕಳಿ ಭೀತಿ ಎದುರಾಗಿದೆ. ಚರಂಡಿಗಳನ್ನು ನಿರ್ಮಿಸದ ಕಾರಣ ಮರಗಳ ಬುಡ ಭಾಗದ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದ್ದು ಇದು ಕೂಡ ಮರಗಳ ಬುಡ ಸಡಿಲಗೊಳ್ಳಲು ಕಾರಣವಾಗಿ ಪ್ರಯಾಣಿಕರಿಗೆ ಅಪಾಯಕಾರಿಯಾಗಿದೆ.
ಚರಂಡಿಯಲ್ಲಿ ವಿದ್ಯುತ್ ಕಂಬ
ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ವಿದ್ಯುತ್ ಲೈನ್ ಸ್ಥಳಾಂತರಗೊಳಿಸಲಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳನ್ನು ಚರಂಡಿ ಜಾಗದಲ್ಲಿ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯುವ ವೇಳೆ ಕಂಬಗಳ ಬುಡ ಭಾಗದ ಮಣ್ಣು ಕೊಚ್ಚಿಕೊಂಡು ಹೋಗಿ ಇವು ಕೂಡ ರಸ್ತೆಗೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಕೆಲವೊಂದು ಕಂಬಗಳು ವಾಲಿ ನಿಂತಿವೆ. ಕಂಬಗಳ ಮೇಲ್ಭಾಗದಲ್ಲಿ ಹಲವಾರು ಮರಗಳಿದ್ದು ಇವು ಯಾವುದೇ ಕ್ಷಣದಲ್ಲಿ ಧರಶಾಯಿಯಾಗುವ ಸಾಧ್ಯತೆ ಇದೆ.

ತೆರವು ಮಾಡದಿದ್ದರೆ ಅಪಾಯ ಖಚಿತ

ಹೆದ್ದಾರಿಯುದ್ದಕ್ಕೂ ಇರುವ ಅಪಾಯಕಾರಿ ಮರಗಳನ್ನು ತೆರೆವುಗೊಳಿಸದಿದ್ದರೆ ಈ ಮಳೆಗಾಲದಲ್ಲಿ ರಸ್ತೆಗೆ ಉರುಳುವ ಭೀತಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಮರಗಳು ರಸ್ತೆಯತ್ತ ವಾಲುತ್ತಿದ್ದು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ವಾಹನಗಳು, ಪಾದಚಾರಿಗಳ ಜೀವಕ್ಕೆ ಸಂಚಾಕರ ಎದುರಾಗಬಹುದು. ಮಳೆಗಾಲದಲ್ಲಿ ವಾಹನ ಸವಾರರು ಭಯದಲ್ಲೇ ಸಂಚರಿಸಬೇಕಾದ ಸನ್ನಿವೇಶವಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ವ್ಯತ್ಯಯಕ್ಕೂ ಕಾರಣವಾಗುತ್ತದೆ.

ಸೀಟು ಪ್ರದೇಶದಲ್ಲಿರುವ ಅಪಾಯಕಾರಿ ಮರಗಳು ಹಾಗೂ ಗೆಲ್ಲುಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ತಕ್ಷಣ ಇನ್ನೊಮ್ಮೆ ಮನವಿ ಸಲ್ಲಿಸಲಾಗುವುದು.

— ಪ್ರವೀಣ್, ಮೆಸ್ಕಾಂ ಎಇಇ, ಉಜಿರೆ