ಮೈದುಂಬಿ ಹರಿಯುತ್ತಿರುವ ಕಾರ್ಕಳದ ಜಲಪಾತ 
ಉಡುಪಿ

ಮಳೆಗಾಲದಲ್ಲಿ ಮೈಮರೆತರೆ ಆಪತ್ತು

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಶ್ಚಿಮ ಟ್ಟದ ತಪ್ಪಲಿನಲ್ಲಿರುವ ಕಾರ್ಕಳ ಮತ್ತು ಹೆಬ್ರಿ ಸೇರಿದಂತೆ ಉಡುಪಿ ಜಿಲ್ಲೆಯ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಪ್ರಮುಖ ಜಲಪಾತಗಳು ಮತ್ತು ಪ್ರವಾಸಿ ತಾಣಗಳು ಮಳೆಗಾಲದ ನೈಜ ಸೊಬಗನ್ನು ಮೈಗೂಡಿಸಿಕೊಂಡಿವೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದ್ದರೂ ಅತಿಯಾದ ಉತ್ಸಾಹ ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆಯಿದೆ. ಹೀಗಾಗಿ ಜಲಪಾತಗಳ ವೀಕ್ಷಣೆ ಸಂದರ್ಭ ಪ್ರವಾಸಿಗರಲ್ಲಿ ಮುನ್ನೆಚ್ಚರಿಕೆ ಅಗತ್ಯ.
ಕಾರ್ಕಳದ ನಿಟ್ಟೆ ಪರಪಾಡಿ ಪರಿಸರದಲ್ಲಿ ಹರಿಯುವ ಶಾಂಭವಿ ನದಿಯ ಅರ್ಬಿ ಫಾಲ್ಸ್ ಹಾಗೂ ತೆಳ್ಳಾರು ಪರಿಸರದಲ್ಲಿ ಹರಿಯುವ ದುರ್ಗಾ ಫಾಲ್ಸ್, ವಾಳ, ಹುಕ್ರಟ್ಟೆ ಫಾಲ್ಸ್ ಹಾಗೂ ಹೆಬ್ರಿ ಭಾಗದ ಕಬ್ಬಿನಾಲೆ ಮತ್ತು ಮತ್ತಾವು ಪ್ರದೇಶಗಳಲ್ಲಿ ನೀರಿನ ಹರಿವು ತೀವ್ರಗೊಂಡಿದೆ. ಈ ಸ್ಥಳಗಳಲ್ಲಿ ನೀರಿನಮಟ್ಟ ಕ್ಷಣಾರ್ಧದಲ್ಲಿ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಬಂಡೆಗಳ ಮೇಲೆ ಏರುವುದು, ಸೆಲ್ಫಿ ಅಥವಾ ಫೋಟೋಗಾಗಿ ಅಪಾಯಕಾರಿ ಸ್ಥಳಗಳಿಗೆ ತೆರಳುವುದು, ನೀರಿನೊಳಗೆ ಇಳಿಯುವುದು ಹಾಗೂ ಸುರಕ್ಷತಾ ಸೂಚನೆಗಳನ್ನು ನಿರ್ಲಕ್ಷಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ಅರಣ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಸುರಕ್ಷತಾ ಬೇಲಿಗಳನ್ನು ದಾಟುವುದು, ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸುವುದು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಸಾಹಸಕ್ಕೆ ಮುಂದಾಗುವುದು ಕಾನೂನು ಬಾಹಿರವಾಗಿದ್ದು, ಜೀವಕ್ಕೂ ಅಪಾಯಕಾರಿ. ಪ್ರವಾಸಿಗರು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಹಾಗೂ ಸ್ಥಳೀಯರು ಮನವಿ ವಾಡಿದ್ದಾರೆ.

ಪ್ರಕೃತಿ ಸೌಂದರ್ಯ ಆಸ್ವಾದಿಸುವುದು ತಪ್ಪಲ್ಲ, ಆದರೆ ಜೀವದ ಬೆಲೆ ಅದಕ್ಕಿಂತ ದೊಡ್ಡದು. ಪ್ರವಾಸಿಗರು ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಬಾರದು. ಅಪಾಯಕಾರಿ ತಾಣಗಳಲ್ಲಿ ಪ್ರವೇಶ ನಿಷೇಧಿಸಿದ್ದರೂ ಅದನ್ನು ಮುರಿದು ಒಳನುಗ್ಗುವ ಪ್ರವೃತ್ತಿ ಕಡಿಮೆಯಾಗಬೇಕು.

— ಉಮೇಶ್ ಶೆಟ್ಟಿ, ಸ್ಥಳೀಯರು

ಜಲಪಾತಗಳು, ಹೊಳೆಗಳು ಹಾಗೂ ನದಿಗಳಲ್ಲಿ ನೀರಿನ ಹರಿವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ. ಸಾರ್ವಜನಿಕರು ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸಬಾರದು. ಸುರಕ್ಷತಾ ಬೇಲಿಗಳನ್ನು ದಾಟಬಾರದು ಹಾಗೂ ಸೆಲ್ಫಿ ಅಥವಾ ಸಾಹಸಕ್ಕಾಗಿ ಜೀವ ಪಣಕ್ಕಿಡಬಾರದು. ಅರಣ್ಯ ಇಲಾಖೆ ಮತ್ತು ಸ್ಥಳೀಯಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸುರಕ್ಷಿತರಾಗಿರಬೇಕು.

— ಜಿ.ಡಿ.ದಿನೇಶ್ ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿ