ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸತ್ತು ಒಣಗಿದ ಅಪಾಯಕಾರಿ ಮರಗಳು.
ಮೂಲ್ಕಿ: ದಿನ ಒಂದರಲ್ಲಿ ಸಹ್ರಾರು ಪ್ರಯಾಣಿಕರು ಭೇಟಿ ನೀಡುವ ರೈಲ್ವೆ ನಿಲ್ದಾಣದ ಮುಖ್ಯ ಸಂಪರ್ಕ ರಸ್ತೆಯಲ್ಲಿ ಒಣಗಿದ ಮರಗಳು ಅಪಾಯಕಾರಿಯಾಗಿ ಬೀಳುವ ಸ್ಥಿತಿಯಲ್ಲಿದ್ದು ತೆರವುಗೊಳಿಸಬೇಕಾದ ಅಗತ್ಯವಿದೆ.
ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಧಾನ ರಸ್ತೆಯಲ್ಲಿ ಒಣಗಿದ ಮರಗಳು ಬೀಳುವ ಸ್ಥಿತಿಯಲ್ಲಿದೆ. ಹಾಗೆಯೇ ರೈಲ್ವೆ ನಿಲ್ದಾಣದ ಎದುರು ಭಾಗದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಅನೇಕ ಮರಗಳು ಬೀಳುವ ಸ್ಥಿತಿಯಲ್ಲಿದೆ. ಕೂಡಲೇ ಇದನ್ನು ರೈಲ್ವೆ ಇಲಾಖೆ ತೆರವುಗೊಳಿಸಬೇಕಾದ ಅಗತ್ಯತೆ ಇದೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವ ಸಂದರ್ಭ ಮರದ ಕೊಂಬೆ ಮುರಿದು ಬಿದ್ದರೆ ಪ್ರಾಣಾಪಾಯ ಗ್ಯಾರಂಟಿ. ಈ ಮರದ ಕೆಳಗೆ ವಿದ್ಯುತ್ ಲೈನ್ ಹಾದು ಹೋಗಿದ್ದು, ಮಳೆ-ಗಾಳಿ ಸಂದರ್ಭ ಅಪಾಯವಿದೆ.
ಈ ಪ್ರದೇಶಕ್ಕೆ ಹತ್ತಿರವಾಗಿ ವಸತಿ ಪ್ರದೇಶವಿದ್ದು ಇಲ್ಲಿನ ಮಕ್ಕಳು ಆಟ ಅಥವಾ ಓಡಾಡಲು ಈ ರಸ್ತೆಯನ್ನು ಬಳಸುವ ಕಾರಣ ಅತೀ ಶೀಘ್ರವಾಗಿ ಒಣಗಿದ ಮರ ತೆರವುಗೊಳಿಸುವುದು, ರಸ್ತೆ ಅಗಲೀಕರಣಗೊಳಿಸಿ ದ್ವಿಪಥ ರಸ್ತೆಯನ್ನಾಗಿಸುವುದು ಅಗತ್ಯ ಎಂದು ಸ್ಥಳಿಯರು ಎಚ್ಚರಿಸಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ಅಥವಾ ಈ ಪ್ರದೇಶದ ಜನಪ್ರತಿನಿಧಿಗಳು ಗಮನ ಹರಿಸುವುದು ಅಗತ್ಯ.
ಈ ರಸ್ತೆಯಲ್ಲಿ ಸಂಚಾರ ಅಥವಾ ಪ್ರಯಾಣಿಕರಿಗಾಗಿ ಕಾಯುವ ಸಂದರ್ಭ ಮರ ಮುರಿದು ಅವಘಡ ಸಂಭವಿಸಿದರೆ ಯಾರು ಹೊಣೆ. ಈ ಬಗ್ಗೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು.