ನೃತ್ಯ ನಿಕೇತನ ನಿರ್ದೇಶಕ ಕೆ. ಸುಧೀರ್​ ರಾವ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ನ. 21, 22ರಂದು ನೃತ್ಯಜಾತ್ರೆ ಸಂಭ್ರಮ

ಉಡುಪಿ: ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಕೊಡವೂರು ನೃತ್ಯ ನಿಕೇತನ ಸಂಯೋಜನೆಯಲ್ಲಿ ವಿಶಿಷ್ಟ ನೃತ್ಯಜಾತ್ರೆ ಸಂಭ್ರಮ ನ. 21 ಮತ್ತು 22ರಂದು ಜರುಗಲಿದೆ ಎಂದು ನೃತ್ಯ ನಿಕೇತನ ನಿರ್ದೇಶಕ ಕೆ. ಸುಧೀರ್​ ರಾವ್​ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಮಧ್ಯಾಹ್ನ 3.30ರಿಂದ ರಾತ್ರಿ 9.30ರವರೆಗೆ ವಿವಿಧ ಸಾಂಸತಿಕ ಹಾಗೂ ಕಲಾ ಪ್ರಕಾರಗಳ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ನ. 21ರಂದು ಸಂಜೆ 3:30ಕ್ಕೆ ನಟರಾಜನ ರಥೋತ್ಸವ ನಡೆಯಲಿದೆ. ಸಂಜೆ 6-.50ರಿಂದ 7-.20ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ನೃತ್ಯಗುರು ಉಳ್ಳಾಲ ಮೋಹನ್​ ಕುಮಾರ್​, ಉದ್ಯಮಿ ಹರೀಶ್​ ರಾಯಸ್​, ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ವಿಶ್ವನಾಥ ಶೆಣೈ, ಸಾಧುಸಾಲ್ಯಾನ್​, ಹರಿಪ್ರಸಾದ್​ ರೈ, ರಾಜಾರಾಮ ಭಟ್​, ನಂದಿನಿ ಸತೀಶ್​ ಪೈ ಭಾಗವಹಿಸಲಿದ್ದಾರೆ. ರಾತ್ರಿ 7:30ರಿಂದ 9:30ರವರೆಗೆ ನೃತ್ಯ ನಿಕೇತನ ಕೊಡವೂರುನ ವಿದ್ಯಾರ್ಥಿಗಳಿಂದ ನೃತ್ಯವೈಭವ ಹಮ್ಮಿಕೊಳ್ಳಲಾಗಿದೆ ಎಂದರು.

22ರಂದು ಸಂಜೆ 3:30ಕ್ಕೆ ಭಕ್ತಿಸಂಗೀತ, 4-.20 ರಿಂದ ಜಾನಪದ ಸಂಗೀತ, 5.-10ರಿಂದ ಯಕ್ಷಸಂಗೀತ , 6 ರಿಂದ 6-.40ರವರೆಗೆ ಸಮಕಾಲೀನ ಸಂಗೀತ ಜರಗಲಿದೆ.

ಸಂಜೆ 6-.50ಕ್ಕೆ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ, ಉದ್ಯಮಿ ರಂಜನ್​ ಕಲ್ಕೂರ್​ , ಮೋಹನ್​ ಉಪಾಧ್ಯಾಯ, ಬಾಲಗಂಗಾಧರ್​, ಕೆ. ನಾರಾಯಣ ಬಲ್ಲಾಳ್​, ವಿಶ್ವನಾಥ ಪೈ ಉಪಸ್ಥಿತರಿರುವರು. ರಾತ್ರಿ 7:30ರಿಂದ 9:30ರವರೆಗೆ ನೃತ್ಯ ನಿಕೇತನ ಕೊಡವೂರು ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.

ಮಳಿಗೆಗಳು ಮತ್ತು ಪ್ರದರ್ಶನಗಳು

ವೇದಿಕೆಯ ಆವರಣದಲ್ಲಿ ನೃತ್ಯದ ಆಭರಣಗಳು, ವಸ್ತ್ರಗಳು, ಗಜ್ಜೆ, ಗಜ್ಜೆ ಚೀಲ, ಖಾದಿ ಬಟ್ಟೆಗಳು, ಕಲಾ ಪ್ರಾತ್ಯಕ್ಷಿಕೆಗಳು, ಗೃಹ ಉತ್ಪನ್ನಗಳು, ಪುಸ್ತಕ ಮಳಿಗೆ, ಸೆಲ್ಫಿ ಕಾರ್ನರ್​, ಬಟ್ಟೆ ತಯಾರಿಕೆಯ ಪ್ರಾತ್ಯಕ್ಷಿಕೆ, ಮಣ್ಣಿನ ಉತ್ಪನ್ನಗಳ ಪ್ರಾತ್ಯಕ್ಷಿಕೆ, ಕಾವಿ ಕಲೆಯ ಪ್ರಾತ್ಯಕ್ಷಿಕೆ, ಚುಕ್ಕಿ ಕಲಾಪ್ರದರ್ಶನ ಹಾಗೂ ತಿಂಡಿತಿನಿಸುಗಳ ಮಳಿಗೆಗಳು ಇರಲಿವೆ. ನೃತ್ಯ ನಿಕೇತನ ಕೊಡವೂರು ಸಂಸ್ಥೆಯ 375ಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನಗಳು ಅದ್ಧೂರಿಯಾಗಿ ಮೂಡಿಬರಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿದುಷಿ ಮಾನಸಿ ಸುಧೀರ್​, ವಾದಿರಾಜ ಭಟ್​, ಉಮೇಶ್​ ಭಟ್​ ಉಪಸ್ಥಿತರಿದ್ದರು.