ತುಮ್ಮಿನಮುಲ್ಲಿ ಸಾಲಾಡಿ ಕಿಂಡಿ ಅಣೆಕಟ್ಟಿನ ತಡೆಗೋಡೆ ಮೇಲೆ ಗ್ರಾಮಸ್ಥರು ಸಂಚರಿಸುತ್ತಿರುವುದು. 
ಉಡುಪಿ

ಅಣೆಕಟ್ಟು ತಡೆಗೋಡೆ ಸಂಚಕಾರ!

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇನಾಪುರ ಗ್ರಾಮದಲ್ಲಿರುವ ಬೃಹತ್ ತೋಡಿಗೆ ಅಡ್ಡಲಾಗಿ ನಿರ್ಮಿಸಿರುವ ತುಮ್ಮಿನಮುಲ್ಲಿ ಸಾಲಾಡಿ ಕಿಂಡಿ ಅಣೆಕಟ್ಟಿನ ತಡೆಗೋಡೆ ಭಾಗದಲ್ಲಿ ಸುರಕ್ಷತಾ ಕಂಬಗಳಿಲ್ಲದ ಕಾರಣ ಶಾಲಾ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಅಪಾಯದ ನಡುವೆಯೇ ಸಂಚರಿಸುವಂತಾಗಿದೆ.
ಪ್ರಮುಖವಾಗಿ ಸಾಲಾಡಿ, ಹಕ್ಲಾಡಿ, ಹುಬ್ಬಾಲಬೆಟ್ಟು, ಸೇನಾಪುರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 2022ರಲ್ಲಿ ಜಿಪಂ ವತಿಯಿಂದ ತುಮ್ಮಿನಮುಲ್ಲಿ ಸಾಲಾಡಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಸೇನಾಪುರ, ಹುಬ್ಬಾಳಬೆಟ್ಟು, ಸಾಲಾಡಿ ನಡುವಿನ ಪ್ರದೇಶದ ಜನರಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಈ ಸೇತುವೆ ತಡೆಗೋಡೆ ಬಳಿ ಸುರಕ್ಷತಾ ಕಂಬಗಳಿಲ್ಲದೆ ಅಪಾಯ ಎದುರಾಗಿದೆ.
ಮಾರ್ಗದಲ್ಲಿ ನಿತ್ಯವೂ 50ಕ್ಕೂ ಹೆಚ್ಚು ಮಂದಿ ಸಂಚರಿಸುತ್ತಿದ್ದು, 20ಕ್ಕೂ ಹೆಚ್ಚು ಶಾಲಾ ಮಕ್ಕಳು ಹಕ್ಲಾಡಿ ಶಾಲೆಗೆ ತೆರಳಲು ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ. ಸಾಲಾಡಿ ಪ್ರದೇಶದಿಂದ ಹುಬ್ಬಾಳಬೆಟ್ಟು, ಸೇನಾಪುರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ದಾರಿಯಾಗಿರುವ ಈ ಸೇತುವೆಯಲ್ಲಿ ಜನರು ಪ್ರತಿದಿನ ಓಡಾಡುತ್ತಿದ್ದರೂ ತಡೆಗೋಡೆಗೆ ಇದುವರೆಗೆ ಯಾವುದೇ ಸುರಕ್ಷತಾ ಕಂಬಗಳನ್ನು ಅಳವಡಿಸಿಲ್ಲ. ಮಳೆಗಾಲ ಸಂದರ್ಭಗಳಲ್ಲಿ ಹೆಚ್ಚಿನ ಅಪಾಯ ಎದುರಾಗುತ್ತದೆ ಎಂಬುದು ಸ್ಥಳೀಯರ ಮಾತು.

ಮಳೆಗಾಲದಲ್ಲಿ ಹೆಚ್ಚು ಅಪಾಯ

ಪ್ರತಿ ಮಳೆಗಾಲ ಸಂದರ್ಭದಲ್ಲೂ 12 ಅಡಿ ಆಳದ ತೋಡು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದೇ ವೇಳೆ ಈ ವಾರ್ಗದಲ್ಲಿ ಸಂಚರಿಸುವ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಜೀವ ಭಯದಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ. ಕೆಲ ದಿನಗಳ ಹಿಂದೆ ಇಬ್ಬರು ವಯೋವೃದ್ಧರು ಕಾಲುಜಾರಿ ಬಿದ್ದಿದ್ದು, ಅದೃಷ್ಟವಶಾತ್ ತೋಡಿಗೆ ಬೀಳುವ ಅಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಸೇತುವೆಗೆ ಅಗತ್ಯ ಸುರಕ್ಷತಾ ಕಂಬಗಳನ್ನು ಅಳವಡಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಮುಖ ಸಂಪರ್ಕ ಸೇತುವೆ

ಹೊಸಾಡು ಗ್ರಾಪಂ ವ್ಯಾಪ್ತಿಯ ಸೇನಾಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ, ರೇಷನ್ ವಿತರಣೆ ಕೇಂದ್ರ ಹಾಗೂ ಇನ್ನಿತರ ಕೆಲಸಗಳಿಗೆ ಸಾಲಾಡಿ ಪ್ರದೇಶದಿಂದ ಮತ್ತು ಸೇನಾಪುರ, ಹುಬ್ಬಾಳಬೆಟ್ಟು ಪ್ರದೇಶದಿಂದ ನಿತ್ಯವೂ ಹತ್ತಾರು ಜನರು ಈ ಸೇತುವೆಯ ತಡೆಗೋಡೆ ಮೇಲೆ ಸಂಚರಿಸುತ್ತಿದ್ದಾರೆ.

ತುಮ್ಮಿನಮುಲ್ಲಿ ಸಾಲಾಡಿ ಕಿಂಡಿ ಸೇತುವೆಯ ತಡೆಗೋಡೆ ಮೇಲೆ ನಿತ್ಯವೂ ಶಾಲಾ ಮಕ್ಕಳು ಸೇರಿದಂತೆ 50ಕ್ಕೂ ಮಿಕ್ಕಿ ಜನರು ಸಂಚರಿಸುತ್ತಿದ್ದಾರೆ. ಇಲ್ಲಿ ಸುರಕ್ಷತಾ ಕಂಬಗಳು ಇಲ್ಲದಿರುವುದರಿಂದ ಅಪಾಯ ಹೆಚ್ಚಿದೆ. ಕೂಡಲೇ ಸ್ಥಳೀಯಾಡಳಿತ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸುರಕ್ಷತಾ ಕಂಬಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು.

— ರಾಜು ಸೇನಾಪುರ ಸಾಮಾಜಿಕ ಕಾರ್ಯಕರ್ತ

ಈವರೆಗೆ ತುಮ್ಮಿನಮುಲ್ಲಿ ಸಾಲಾಡಿ ಕಿಂಡಿ ಸೇತುವೆಯ ಸಂಬಂಧಿಸಿದಂತೆ ಯಾವುದೇ ದೂರುಗಳ ಬಂದಿಲ್ಲ. ಒಂದೆರೆಡು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

— ಶೋಭಾ ಹೊಸಾಡು ಪಿಡಿಒ