ಉಡುಪಿಯಲ್ಲಿ ಆಯೋಜಿಸಿದ್ದ ಮಹಿಷ ಮಂಡಲೋತ್ಸವವನ್ನು ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಗಣೇಶ ನೆರ್ಗಿ, ಕಿಶನ್​ ಹೆಗ್ಡೆ ಕೊಳ್ಕೆಬೈಲು, ಸುಧೀರ ಕುಮಾರ ಮುರೊಳ್ಳಿ, ನಾರಾಯಣ ಮಣೂರು, ವಾಸುದೇವ ಮದ್ದೂರು, ಸತೀಶ್​ ಕಂಚುಗೋಡು, ದಯಾಕರ ಮಲ್ಪೆ, ಜಯನ್​ ಮಲ್ಪೆ ಇದ್ದರು. 
ಉಡುಪಿ

ದಾನವರೆಂದರೆ ರಾಕ್ಷಸರಲ್ಲ; ದಾನವಂತರು

* ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರತಿಪಾದನೆ

* ಮಹಿಷ ಮಂಡಲೋತ್ಸವ, ಸಾಂಸ್ಕೃತಿಕ ಹಬ್ಬ ಉದ್ಘಾಟನೆ

ಉಡುಪಿ: ಯಾವ ಸಮುದಾಯ ಎಚ್ಚೆತ್ತಕೊಂಡು ಜಾಗೃತವಾಗುತ್ತದೋ ಅದು ದೇಶವನ್ನು ಆಳಲು ಸಾಧ್ಯ. ದಾನವರೆಂದರೆ ರಾಕ್ಷಸರಲ್ಲ ದಾನವಂತರು. ಅವರು ಭೂಮಿ, ಪ್ರಕೃತಿಯ ರಕ್ಷಕರು. ಅವರೆಂದೂ ಸುರಾಪಾನ ಮಾಡಿದವರಲ್ಲ. ಅವರನ್ನು ತಪ್ಪಾಗಿ ಚಿತ್ರಿಸಲಾಗಿದೆ. ಮೈಸೂರು ಚಾಮುಂಡೇಶ್ವರಿಯ ಆರಾಧನೆಗೂ ಮಹಿಷಾಸುರನಿಗೂ ಯಾವುದೇ ಸಂಬಂಧವಿಲ್ಲ. ಆತ ರಾಕ್ಷಸನಾಗಿದ್ದರೆ ಅಂದಿನ ರಾಜರು ಆತನ ದೊಡ್ಡ ಪ್ರತಿಮೆ ಏಕೆ ಅಳವಡಿಸುತ್ತಿದ್ದರು? ಆದಿವಾಸಿ ಜನರ ರಕ್ಷಕನಾಗಿದ್ದ ಮಹಿಷಾಸುರನನ್ನು ರಾಕ್ಷಸ ಎಂದು ಇತಿಹಾಸದಲ್ಲಿ ತಿರುಚಲಾಗಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ಉಡುಪಿಯ ಬನ್ನಂಜೆಯಲ್ಲಿರುವ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್​ ಯುವಸೇನೆ ಸಮಿತಿಯಿಂದ ರವಿವಾರ (ಅ.12) ಆಯೋಜಿಸಿದ್ದ ಮಹಿಷ ಮಂಡಲೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸನ್ಮಾನ

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು, ದಲಿತ ದೌರ್ಜನ್ಯ ತಡೆ ಜಾಗೃತಿ ಸಮಿತಿ ನಿರ್ದೇಶಕ ಯು.ಪರಮೇಶ್ವರ, ಸಮಾಜ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಆಶಾ ಅವರನ್ನು ಸನ್ಮಾನಿಸಲಾಯಿತು.

ಅಂಬೇಡ್ಕರ್​ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ ನೆರ್ಗಿ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ ಕುಮಾರ ಮುರೊಳ್ಳಿ, ಚಿಂತಕ ನಾರಾಯಣ ಮಣೂರು, ದ.ಸಂ.ಸ. ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು, ಉಡುಪಿ ಅಂಬೇಡ್ಕರ್​ ಸೇನೆಯ ಜಿಲ್ಲಾಧ್ಯಕ್ಷ ಸತೀಶ ಕಂಚುಗೋಡು, ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಕುಮಾರ ಪರ್ಕಳ ಉಪಸ್ಥಿತರಿದ್ದರು.

ಶಂಕರದಾಸ ಹಾಗೂ ತಂಡದವರು ಕ್ರಾಂತಿಗೀತೆ ಹಾಡಿದರು. ದಯಾಕರ ಮಲ್ಪೆ ಸ್ವಾಗತಿಸಿದರು. ಚಿಂತಕ ಜಯನ್​ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘು ಶೀರೂರು ಕಾರ್ಯಕ್ರಮ ನಿರೂಪಿಸಿದರು. ರವಿರಾಜ ಲಕ್ಷ್ಮೀನಗರ ವಂದಿಸಿದರು.

ನಾವೀಗ ಓದುತ್ತಿರುವ ಭಾರತದ ಇತಿಹಾಸದಲ್ಲಿ ನೈಜತೆಯಿಲ್ಲ. ಯಾವ ಸಮುದಾಯಕ್ಕೆ ತಮ್ಮ ಸಾಂಸ್ಕೃತಿಕ ಹಿನ್ನೆಲೆ, ಪರಂಪರೆಯ ತಿಳಿವಳಿಕೆ ಇರುವುದಿಲ್ಲವೋ ಆ ಸಮುದಾಯ ಶಾಶ್ವಾತವಾಗಿ ಅನಾಥವಾಗುತ್ತದೆ. ಹಕ್ಕು, ಅಧಿಕಾರಗಳಿಂದ ವಂಚಿತರಾಗುತ್ತಾರೆ ಎಂದು ಡಾ. ಅಂಬೇಡ್ಕರ್​ ಹೇಳಿದ್ದರು. ನಾವು ನಮ್ಮಮೂಲ ಪುರುಷರ ಬಗ್ಗೆ ಓದದಿರುವುದು ನಮಗೆ ನಾವೇ ಮಾಡಿಕೊಂಡ ವಂಚನೆ, ದ್ರೋಹ.
ಜ್ಞಾನಪ್ರಕಾಶ ಸ್ವಾಮೀಜಿ. ಉರಿಲಿಂಗ ಪೆದ್ದಿಮಠ, ಮೈಸೂರು.