ಸಾಂದರ್ಭಿಕ ಚಿತ್ರ 
ಉಡುಪಿ

ಸಿಬಿಐ ಅಧಿಕಾರಿ ವೇಷದಲ್ಲಿ 15.98 ಲಕ್ಷ ರೂ. ಸೈಬರ್​ ವಂಚನೆ

ಉಡುಪಿ: ಮನಿ ಲಾಂಡರಿಂಗ್​ ಮತ್ತು ಡ್ರಗ್ಸ್​ ಕೇಸ್​ ಇದೆ ಎಂದು ನಂಬಿಸಿ, ದೆಹಲಿ ಸಿಬಿಐ ಹಾಗೂ ಪೊಲೀಸರ ಹೆಸರಿನಲ್ಲಿ ವಿಡಿಯೋ ಕಾಲ್​ ಮಾಡಿ ಬೆದರಿಸಿದ ಸೈಬರ್​ ವಂಚಕರು ಉಡುಪಿಯ ವ್ಯಕ್ತಿಯೊಬ್ಬರಿಂದ ಒಟ್ಟು 15,98,976 ರೂ. ಹಣವನ್ನು ಕೊಳ್ಳೆಹೊಡೆದಿರುವ ಬಗ್ಗೆ ಉಡುಪಿ ಸೆನ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಶೇಷಾಚಲ (51) ಎಂಬುವವರಿಗೆ ಅ. 18ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿದೆ. ಹಿಂದಿಯಲ್ಲಿ ಮಾತನಾಡಿದ ಆ ವ್ಯಕ್ತಿ, ದೆಹಲಿಯಲ್ಲಿ ನಿಮ್ಮ ಹೆಸರಿನಲ್ಲಿ ಐಸಿಐಸಿಐ ಬ್ಯಾಂಕ್​ ಪಾಸ್​ಬುಕ್​ ಸಿಕ್ಕಿದೆ. ಪಂಕಜ್​ ಶಮಾರ್ ಎನ್ನುವವರ ಹೆಸರಿನ ಮನಿ ಲಾಂಡರಿಂಗ್​, ಡ್ರಗ್ಸ್​ ಹಾಗೂ ಚೈಲ್ಡ್​ ಕಿಡ್ನಾಪಿಂಗ್​ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ಹೇಳಿದ್ದಾನೆ. ದೆಹಲಿ ಸಿಬಿಐ ಪೊಲೀಸರು ಕೂಡಲೇ ನಿಮ್ಮನ್ನು ಬಂಧಿಸಲು ಕೋರ್ಟ್​ನಿಂದ ವಾರೆಂಟ್​ ಹೊರಡಿಸಲಾಗಿದೆ. ತಕ್ಷಣ ದೆಹಲಿಗೆ ಬನ್ನಿ, ಇಲ್ಲವಾದರೆ ವಿಡಿಯೋ ಕಾಲ್​ ಮೂಲಕ ತನಿಖೆಗೆ ಸಹಕರಿಸಿ ಎಂದು ಹೆದರಿಸಿದ್ದಾರೆ.

ವಂಚಕರ ಮಾತಿಗೆ ಬೆಚ್ಚಿಬಿದ್ದ ಶೇಷಾಚಲ ಹೆಂಡತಿಯ ಮೊಬೈಲ್​ ನಂಬರ್​ ನೀಡಿದ್ದಾರೆ. ಕೂಡಲೇ ಆ ನಂಬರ್​ಗೆ ಬಂದ ವಿಡಿಯೋ ಕರೆಯಲ್ಲಿ ಪೊಲೀಸ್​ ಸಮವಸ್ತ್ರ ಧರಿಸಿದ್ದ ವ್ಯಕ್ತಿ ತಾನು ದೆಹಲಿ ಪೊಲೀಸ್​ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಪ್ರತಿ ಗಂಟೆಗೊಮ್ಮೆ ನಮಗೆ ಸಂದೇಶ ಕಳುಹಿಸಬೇಕು, ಈ ವಿಚಾರವನ್ನು ಯಾರಿಗೂ ಹೇಳಬಾರದು, ಹೇಳಿದರೆ ನಿಮಗೆ ದೊಡ್ಡ ಅಪಾಯ ಕಾದಿದೆ ಎಂದು ಬೆದರಿಸಿ ನಿರಂತರವಾಗಿ ವಿಡಿಯೋ ಕಾಲ್​ ಮಾಡುತ್ತಿದ್ದರು. ಶೇಷಾಚಲ ಅವರ ಬಳಿಯಿದ್ದ ಹಣ, ಚಿನ್ನ ಹಾಗೂ ಬ್ಯಾಂಕ್​ ಖಾತೆಗಳ ಸಂಪೂರ್ಣ ವಿವರಗಳನ್ನು ಪಡೆದುಕೊಂಡಿದ್ದಾರೆ. ನಿಮ್ಮ ಬಳಿ ಇರುವ ಎಲ್ಲಾ ಹಣವನ್ನು ಆರ್​ಬಿಐ ತನಿಖೆಗಾಗಿ ನಾವು ನೀಡಿದ ಬ್ಯಾಂಕ್​ ಖಾತೆಗೆ ಜಮಾ ಮಾಡುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದನ್ನು ನಂಬಿದ ಶೇಷಾಚಲ ಅವರು ತನ್ನ ಬ್ಯಾಂಕ್​ ಖಾತೆಯಿಂದ 11,00,000 ರೂ. ಹಣವನ್ನು ಆರೋಪಿಗಳ ಯೆಸ್​ ಬ್ಯಾಂಕ್​ ಖಾತೆಗೆ ಜಮಾ ಮಾಡಿದ್ದಾರೆ. ಮತ್ತೊಮ್ಮೆ ಅಪರಿಚಿತರು ಸೂಚಿಸಿದ ಬ್ಯಾಂಕ್​ ಆಫ್​ ಇಂಡಿಯಾ ಖಾತೆಗೆ 4,98,976 ರೂ. ವರ್ಗಾಯಿಸಿದ್ದಾರೆ.