ತಲ್ಲೂರು ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ತಲ್ಲೂರು ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ನಡೆಯಿತು. ಪ್ರಮುಖರಾದ ಶಿವಕುಮಾರ್, ಶಶಿರಾಜ್, ಗಂಗೊಳ್ಳಿ ದಿನೇಶ ಶೆಟ್ಟಿ, ವಿಜಯ ಕುಮಾರ್, ಚಂದ್ರಶೇಖರ ಬಿ., ವಾಸು ಮರಾಠಿ ಉಪಸ್ಥಿತರಿದ್ದರು. 
ಉಡುಪಿ

ಗ್ರಾಹಕರಿಗೆ ಜನಸಂಪರ್ಕ ಮಾಹಿತಿ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜನಸಂಪರ್ಕ ಸಭೆ ಬಗ್ಗೆ ಸರಿಯಾದ ಪ್ರಚಾರ ನಡೆಸಿಲ್ಲ. ತಲ್ಲೂರು ಉಪವಿಭಾಗ ವ್ಯಾಪ್ತಿಗೆ ಬರುವ ಗ್ರಾಪಂಗಳಿಗೂ, ಯಾವುದೇ ಗ್ರಾಹಕರಿಗೆ ಜನಸಂಪರ್ಕ ಸಭೆ ಬಗ್ಗೆ ಮಾಹಿತಿ ನೀಡಿಲ್ಲ. ಕಾಟಾಚಾರಕ್ಕೆ ಸಭೆ ನಡೆಸುವ ಬದಲು ಗ್ರಾಹಕರಿಗೆ ಮಾಹಿತಿ ನೀಡಿ ಸಭೆ ನಡೆಸಬೇಕು ಎಂದು ತಲ್ಲೂರು ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಉದಯಕುಮಾರ್ ತಲ್ಲೂರು ಆಗ್ರಹಿಸಿದರು.
ತಲ್ಲೂರು ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಶುಕ್ರವಾರ ಮೆಸ್ಕಾಂ ತಲ್ಲೂರು ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಸ್ವಂತ ಖರ್ಚಿನಿಂದ ಮಾಡಿಕೊಂಡ ವಿದ್ಯುತ್ ಸಂಪರ್ಕ ಕೇಬಲ್ ಮತ್ತು ಮೀಟರನ್ನು ಮೆಸ್ಕಾಂ ಅಧಿಕಾರಿಗಳು ಕಚೇರಿಯಲ್ಲಿ ಇಟ್ಟುಕೊಂಡಿದ್ದು, ಈ ರೀತಿ ಮಾಡಲು ಅವಕಾಶ ಇದೆಯೇ? ಮೆಸ್ಕಾಂ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರ ನೇಮಕದ ಬಗ್ಗೆ ಇರುವ ಮಾನದಂಡಗಳೇನು ಎಂದು ತಲ್ಲೂರು ಗ್ರಾಪಂ ಮಾಜಿ ಸದಸ್ಯ ಕೃಷ್ಣ ಪೂಜಾರಿ ಪ್ರಶ್ನಿಸಿದರು.
ತಲ್ಲೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ ಕುಮಾರ್ ಮಾತನಾಡಿ, ಜನಸಂಪರ್ಕ ಸಭೆ ಬಗ್ಗೆ ದಿನಪತ್ರಿಕೆಗಳಲ್ಲಿ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಆಯೋಜಿಸಲು ಚಿಂತನೆ ನಡೆಸಲಾಗುವುದು. ವಿದ್ಯುತ್ ಕಳ್ಳತನ ನಡೆಯುತ್ತಿದ್ದರೆ ಮೆಸ್ಕಾಂ ವಿಚಕ್ಷಣ ದಳಕ್ಕೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು. ಖಾಲಿ ಇರುವ ಲೈನ್‌ಮನ್ ನೇಮಕಾತಿ ನಡೆಯುತ್ತಿದೆ ಎಂದರು.
ಹೆಮ್ಮಾಡಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆ ಬಳಿ ಜೋತಾಡುತ್ತಿರುವ ವಿದ್ಯುತ್ ಸರ್ವೀಸ್ ತಂತಿ ಸರಿಪಡಿಸುವಂತೆ ಸೂಚನೆ ನೀಡಲಾಗುವುದು ಎಂದು ತಲ್ಲೂರು ಜೆಇ ಸುರೇಶ ಬಾಬು ತಿಳಿಸಿದರು.
ಲೆಕ್ಕಾಧಿಕಾರಿ ಶಿವಕುಮಾರ್, ಸಹಾಯಕ ಇಂಜಿನಿಯರ್ ಶಶಿರಾಜ್, ಗಂಗೊಳ್ಳಿ ಶಾಖಾಧಿಕಾರಿ ದಿನೇಶ ಶೆಟ್ಟಿ, ನಾಡಾ ಶಾಖಾಧಿಕಾರಿ ವಿಜಯ ಕುಮಾರ್, ವಂಡ್ಸೆ ಶಾಖಾಧಿಕಾರಿ ಚಂದ್ರಶೇಖರ ಬಿ., ಹಿರಿಯ ಸಹಾಯಕ ವಾಸು ಮರಾಠಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಅನಧಿಕೃತ ವಿದ್ಯುತ್ ಸಂಪರ್ಕ
ತಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಶಿಫಾರಸ್ಸಿಗೆ ಬೆಲೆ ನೀಡದೆ ರಾಜಕೀಯ ಪಕ್ಷದ ಮುಖಂಡರೊಬ್ಬರು ಹೇಳಿದ ಕೂಡಲೇ ವಿದ್ಯುತ್ ಸಂಪರ್ಕ ನೀಡಿರುವುದು ಸರಿಯಲ್ಲ. ಅನಧಿಕೃತ ವಿದ್ಯುತ್ ಸಂಪರ್ಕದ ಬಗ್ಗೆ ಅನೇಕ ಜನಸಂಪರ್ಕ ಸಭೆಗಳಲ್ಲಿ ಮಾಹಿತಿ ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯುತ್ ಸಂಪರ್ಕ ನೀಡಲು ಸತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂತು.