ಉಡುಪಿ ಜಿಲ್ಲೆ ಕುಂದಾಪುರದ ಶಂಕರನಾರಾಯಣ ಕಾಲೇಜ್​ನಲ್ಲಿ ಆಯೋಜಿಸಿದ್ದ 'ಯುವ ಸೌರಭ' ಕಾರ್ಯಕ್ರಮವನ್ನು ಡಾ. ವೆಂಕಟರಾಮ ಭಟ್ಟ ಉದ್ಘಾಟಿಸಿದರು. ಪೂರ್ಣಿಮಾ, ಸೋಮಪ್ಪ ಪೂಜಾರಿ, ಡಾ.ದಿವ್ಯಾ ಎಂ., ಡಾ.ನಳಿನಾಶ್ರೀ ಇದ್ದರು. 
ಉಡುಪಿ

ದೇಶದ ಗೌರವದ ಪ್ರತೀಕ ಸಂಸ್ಕೃತಿ, ಸಂಪ್ರದಾಯ

* ಪ್ರಾಂಶುಪಾಲ ಡಾ. ವೆಂಕಟರಾಮ ಭಟ್ಟ ಅನಿಸಿಕೆ

* 'ಯುವ ಸೌರಭ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಯುವಸಮುದಾಯ ಮತ್ತು ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆಧುನಿಕ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಪಾಶ್ಚಿಮಾತ್ಯ ಜೀವನಶೈಲಿ ಅನುಸರಿಸದಿರಿ. ಸನಾತನ ಮೌಲ್ಯಗಳಿಗೆ ಗೌರವ, ಸಹಿಷ್ಣುತೆ, ಕುಟುಂಬ ವ್ಯವಸ್ಥೆ ಹಾಗೂ 'ವಸುದೈವ ಕುಟುಂಬಕಂ' ಎಂಬ ವಿಶಾಲ ಮನೋಭಾವ ರಕ್ಷಿಸುವ ಜವಾಬ್ದಾರಿ ತಮ್ಮ ಮೇಲಿದೆ. ಸಂಸ್ಕೃತಿ, ಸಂಪ್ರದಾಯಗಳು ಭಾರತದ ಗೌರವದ ಪ್ರತೀಕ ಎಂದು ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಪ್ರಾಂಶುಪಾಲ ಡಾ. ವೆಂಕಟರಾಮ ಭಟ್ಟ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶಂಕರನಾರಾಯಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ 'ಯುವ ಸೌರಭ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಂಕರನಾರಾಯಣ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಪ್ಪ ಪೂಜಾರಿ, ಕಾಲೇಜ್​ನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ದಿವ್ಯಾ ಎಂ., ಐಕ್ಯೂಎಸಿ ಸಂಚಾಲಕಿ ಡಾ.ನಳಿನಾಶ್ರೀ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜ್​ನ ಸಹಾಯಕ ಪ್ರಾಧ್ಯಾಪಕ ಡಾ.ಗಂಗಾಧರ ಆರ್​.ಎಚ್​. ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ವಿವಿಧ ಕಲೆಯ ಪ್ರದರ್ಶನ

ಶ್ಯಾಮ ಜಿ.ಎಸ್​. ಪೂಜಾರಿ ಗಂಗೊಳ್ಳಿ ಕೊಳಲು ವಾದನ, ಅನಿಲ ಬಿರ್ತಿ ಮತ್ತು ತಂಡದಿಂದ ವೀರಗಾಸೆ, ಪ್ರಶಾಂತ ಬಿರ್ತಿ ಮತ್ತು ತಂಡದಿಂದ ಕಂಸಾಳೆ, ಚೈತನ್ಯಾ ಮತ್ತು ತಂಡದಿಂದ ಜಾನಪದ ಸಂಗೀತ, ಸಾವಿತ್ರಿ ನೃತ್ಯ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ, ಕಾಲೇಜ್​ನ ಯಕ್ಷಗಾನ ತಂಡದಿಂದ 'ಅಭಿಮನ್ಯು ಕಾಳಗ' ಯಕ್ಷಗಾನ ಪ್ರದರ್ಶನಗೊಂಡಿತು.

ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ದೇಶದ ಭವ್ಯ ಇತಿಹಾಸ, ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಪರಂಪರೆ ಪರಿಚಯಿಸುವ ಮಾಧ್ಯಮವಾಗಬೇಕು. ಯುವ ಸಮುದಾಯವು ವೈಜ್ಞಾನಿಕ ಮನೋಭಾವದೊಂದಿಗೆ ನಮ್ಮ ಸಾಂಸ್ಕೃತಿಕ ಆಚರಣೆಗಳ ಹಿಂದಿನ ಅರ್ಥಪೂರ್ಣ ಮಹತ್ವ ಅರಿತು ಆಚರಿಸಿದಾಗ ಮಾತ್ರ ಭಾರತೀಯ ಸಂಪ್ರದಾಯ ಮುಂದಿನ ಪೀಳಿಗೆ ತಲುಪಲು ಸಾಧ್ಯ.
ಡಾ. ವೆಂಕಟರಾಮ ಭಟ್ಟ. ಶಂಕರನಾರಾಯಣ ಕಾಲೇಜ್​ನ ಪ್ರಾಂಶುಪಾಲ.