ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಅಶ್ವತ್ ಎಸ್.ಎಲ್., ಗಣಪತಿ ಭಟ್, ಗಣಪತಿ ಭಟ್ ಕೆ.ಎಸ್., ಡಾ.ಗಣನಾಥ ಶೆಟ್ಟಿ ಬಿ., ಆದರ್ಶ ಎಂ.ಕೆ. ಉಪಸ್ಥಿತರಿದ್ದರು.  
ಉಡುಪಿ

ಕಠಿಣ ಪ್ರಯತ್ನದ ಸಾಧನೆಗೆ ಕ್ರಿಯೇಟಿವ್ ಪ್ರತಿಭಾ ಪರ್ವ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ನೀಟ್ ಪರೀಕ್ಷೆಯಲ್ಲಿ ಕಠಿಣ ಪ್ರಯತ್ನಪಟ್ಟು ಸಾಧನೆಗೈದಿರುವ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಗೌರವಿಸಬೇಕೆಂಬ ಸದುದ್ದೇಶದಿಂದ ಕ್ರಿಯೇಟಿವ್ ಪ್ರತಿಭಾ ಪರ್ವ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಜತೆಗೆ ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಕ್ರಿಯೇಟಿವ್ ಸಂಸ್ಥೆ ಸದಾ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಹೇಳಿದರು.
ಕ್ರಿಯೇಟಿವ್‌ನ ಸಪ್ತಸ್ವರ ವೇದಿಕೆಯಲ್ಲಿ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದು ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಿಗೆ ಸೇರಿಕೊಳ್ಳಲಿರುವ ಕ್ರಿಯೇಟಿವ್ ಸಂಸ್ಥೆ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರತಿಭಾ ಪರ್ವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಕ್ರಿಯೇಟಿವ್ ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮವಾದ ಕಲಿಕಾ ವಾತಾವರಣ ಕಲ್ಪಿಸಿಕೊಟ್ಟು ಕಾಲಕಾಲಕ್ಕೆ ತಕ್ಕಂತೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ತಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡು ನಿರಂತರವಾಗಿ ಪ್ರಯತ್ನಪಟ್ಟಲ್ಲಿ ಖಂಡಿತ ಯಶಸ್ಸು ಗಳಿಸಲು ಸಾಧ್ಯ ಎಂದರು.
ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದ ತೇಜಸ್ ಹೆಗಡೆ ಎಚ್.ಡಿ., ತೇಜಸ್ ಆರ್.ಬಿ., ಧ್ರುವ ವಿ.ಬಿ., ಲೇಖನ್ ಕಾರ್ಯಪ್ಪ, ಮೋಕ್ಷ ಬಿ.ಎಂ., ಹಿತಾರ್ಥ ವಿ.ಎಸ್., ನಂದನ್ ಜಿ. ಅವರನ್ನು ನಗದು ಬಹುಮಾನದೊಂದಿಗೆ ಗೌರವಿಸಲಾಯಿತು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್., ಡಾ.ಗಣನಾಥ ಶೆಟ್ಟಿ ಬಿ. ಮಾತನಾಡಿದರು. ಸಹ ಸಂಸ್ಥಾಪಕ ಆದರ್ಶ ಎಂ.ಕೆ. ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಇದು ಕೇವಲ ಬಹುಮಾನ ಕೊಡುವ ಕಾರ್ಯಕ್ರಮವಲ್ಲ. ವಿದ್ಯಾರ್ಥಿಗಳ ಪರಿಶ್ರಮ, ಪ್ರತಿಭೆ ಗುರುತಿಸಿ, ಗೌರವ ಸೂಚಿಸುವ ಕಾರ್ಯಕ್ರಮ ಹಾಗೂ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಕೊಡುವ ಅರ್ಥಪೂರ್ಣ ಕಾರ್ಯಕ್ರಮ. ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಉಪನ್ಯಾಸಕರು ಮಾತ್ರವಲ್ಲದೆ ನಿಲಯ ಪಾಲಕರ ತ್ಯಾಗ, ಪರಿಶ್ರಮ ಅಡಗಿದೆ. ಶಿಕ್ಷಕರು, ಹೆತ್ತವರು ಹಾಗೂ ಶಿಕ್ಷಣ ನೀಡಿದ ಸಂಸ್ಥೆಯನ್ನು ಮರೆಯಬಾರದು.

— ಗಣಪತಿ ಭಟ್ ಕೆ.ಎಸ್. ಕ್ರಿಯೇಟಿವ್ ಸಂಸ್ಥೆ ಸಹ ಸಂಸ್ಥಾಪಕ

ರಾಷ್ಟ್ರೀಯಮಟ್ಟದಲ್ಲಿ ನಡೆಯುವ ನೀಟ್‌ನಂತಹ ಅನೇಕ ಪರೀಕ್ಷೆಗಳು ಹಲವು ಕಾರಣಗಳಿಂದ ರದ್ದಾದರೂ ವಿದ್ಯಾರ್ಥಿಗಳು ಅದರ ಬಗ್ಗೆ ಚಿಂತಾಗ್ರಸ್ತರಾಗದೆ ತಮ್ಮ ಗುರಿ ಈಡೇರಿಸುವ ನಿಟ್ಟಿನಲ್ಲಿ ನಮಗೆ ಸಿಕ್ಕಿರುವ ಹೆಚ್ಚುವರಿ ಅವಕಾಶವೆಂದು ಭಾವಿಸಿಕೊಂಡು ಮತ್ತಷ್ಟು ಓದಿನ ಕಡೆಗೆ ಗಮನ ಕೊಟ್ಟಾಗ ಇಂತಹ ಯಶಸ್ಸು ಸಾಧಿಸಲು ಸಾಧ್ಯ.

— ಡಾ.ಗಣನಾಥ ಶೆಟ್ಟಿ ಬಿ. ಕ್ರಿಯೇಟಿವ್ ಸಂಸ್ಥೆ ಸಹ ಸಂಸ್ಥಾಪಕ