ಉಡುಪಿ: ಒಳ್ಳೆಯದನ್ನು ಗುರುತಿಸುವ, ಪ್ರೋತ್ಸಾಹಿಸುವ ಕಾರ್ಯ ಕಡಿಮೆಯಾಗುತ್ತಿದ್ದು ಬೇಡವಾದದ್ದನ್ನೇ ವೈಭವೀಕರಿಸುವ ಪ್ರವೃತ್ತಿ ಹೆಚ್ಚತೊಡಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ, ಚರಿತ್ರೆ, ದೇಶಮೊದಲು ಎಂಬ ಅರಿವು ಮೂಡಿಸುವ ಅಗತ್ಯತೆಯಿದೆ. ಸೃಷ್ಟಿಕರ್ತ ಬ್ರಹ್ಮನಾಗಿದ್ದರೆ ಸಮಾಜ ಹಾಗೂ ದೇಶ ಕಟ್ಟುವ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಗುರುತರ ಜವಾಬ್ದಾರಿ ಶಾಲಾ-ಕಾಲೇಜ್ಗಳ ಗುರುಗಳ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್.ತಿಪ್ಪೇಸ್ವಾಮಿ ಸಲಹೆ ನೀಡಿದರು.
ಉಡುಪಿಯ ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್ಎಂಎಸ್ಎಸ್)ದ ಮಂಗಳೂರು ವಿಭಾಗದ ವತಿಯಿಂದ ಹಾಗೂ ತ್ರಿಶಾ ಕಾಲೇಜ್ನ ಸಹಭಾಗಿತ್ವದಲ್ಲಿ 'ಪ್ರೇರಣಾ ದಿವಸ್-2006'ರ ನಿಮಿತ್ತ ಶನಿವಾರ (ಸೆ.26) ಸಂಜೆ ಆಯೋಜಿಸಿದ್ದ 'ಅಧ್ಯಾಪಕ ಭೂಷಣ' ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.
ಸಮಾಜದಲ್ಲಿ ಉಳಿದಿಲ್ಲ ನೈತಿಕತೆ
ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿಕ್ಷಣ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಮಾಜದಲ್ಲಿ ನೈತಿಕತೆ ಅಧ:ಪತನಗೊಂಡಿದೆ. ಸಂಸ್ಕಾರ, ರಾಷ್ಟ್ರಾಭಿಮಾನ, ಸ್ವಾಭಿಮಾನ ಇಂದಿನ ಮಕ್ಕಳಿಗೆ ಶಿಕ್ಷಣದ ಲಭಿಸುತ್ತಿಲ್ಲ. ರಾಜಕೀಯ, ಧಾರ್ಮಿಕ, ಸರ್ಕಾರದ ಇಲಾಖೆಗಳು ಹಾಗೂ ಶೈಕ್ಷಣಿಕ ಕ್ಷೇತ್ರವನ್ನೂ ಒಳಗೊಂಡು ಎಲ್ಲೆಡೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಔಷಧ, ಆಹಾರವೂ ಕಲಬೆರಕೆಯ ವಿಷವರ್ತುಲಕ್ಕೆ ಸಿಲುಕಿದೆ. ಹೀಗಾಗಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯಾವುದು ಸರಿ. ಯಾವುದು ತಪ್ಪು ಎನ್ನುವುದನ್ನು ಸಮಾಜಕ್ಕೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕಾದ ಅಗತ್ಯತೆ ಹೆಚ್ಚಿದೆ ಎಂದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಗುರುನಾಥ್ ಬಡಿಗೇರ್, ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಮಾಧವ ಎಂ.ಕೆ., ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು, ಕೆಆರ್ಎಂಎಸ್ಎಸ್ ದಕ್ಷಿಣ ಕನ್ನಡ ವಿಭಾಗದ ಅಧ್ಯಕ್ಷೆ ಡಾ.ಸುಧಾ ಯು. ಉಪಸ್ಥಿತರಿದ್ದರು.
ತ್ರಿಶಾ ಕಾಲೇಜ್ನ ವಿದ್ಯಾರ್ಥಿಗಳು ಶಂಖನಾದದೊಂದಿಗೆ ವೇದಘೋಷ ಪಠಿಸಿದರು. ಅನ್ಯಾ ಆಚಾರ್ಯ ಸ್ವಾಗತ ನೃತ್ಯ ಮಾಡಿದರು. ಕೆಆರ್ಎಂಎಸ್ಎಸ್ ಉಡುಪಿ ವಿಭಾಗದ ಅಧ್ಯಕ್ಷ ಡಾ.ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಕೆಆರ್ಎಂಎಸ್ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಶೆಟ್ಟಿ ವಂದಿಸಿದರು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ತಮ ಆಡಳಿತಾಧಿಕಾರಿ ಪ್ರಶಸ್ತಿ- ತ್ರಿಶಾ ಸಮೂಹ ಸಂಸ್ಥೆಗಳ ಸ್ಥಾಪಕ ಸಿಎ ಗೋಪಾಲ್ಕೃಷ್ಣ ಭಟ್, ಸುರತ್ಕಲ್ ಗೋವಿಂದದಾಸ ಕಾಲೇಜ್ನ ನಿರ್ದೇಶಕ (ಆಡಳಿತ) ಪ್ರೊ.ರಮೇಶ್ ಭಟ್ ಎಸ್.ಜಿ., ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಪ್ರಾಂಶುಪಾಲ ಪ್ರೊ. ಪದ್ಮನಾಭ ಕೆ. ಸ್ವೀಕರಿಸಿದರು. ಉತ್ತಮ ಸಂಶೋಧಕ ಪ್ರಶಸ್ತಿ- ಮಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಭೋಜ ಪೂಜಾರಿ, ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಪ್ರಾಂಶುಪಾಲ ಪ್ರೊ.ಅಜಕ್ಕಳ ಗಿರೀಶ್ ಭಟ್ ಸ್ವೀಕರಿಸಿದರು. ಉತ್ತಮ ಅಧ್ಯಾಪಕ ಪ್ರಶಸ್ತಿ- ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಪ್ರಾಂಶುಪಾಲ ಡಾ.ಪ್ರಕಾಶ್ಚಂದ್ರ ಶಿಶಿಲ, ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ, ಮಂಗಳೂರು ಬೆಸೆಂಟ್ ಕಾಲೇಜ್ನ ಪ್ರಾಂಶುಪಾಲ ಡಾ. ಪ್ರವೀಣ್ ಕೆ.ಸಿ. ಸ್ವೀಕರಿಸಿದರು. ಉತ್ತಮ ಗ್ರಂಥಪಾಲಕ ಪ್ರಶಸ್ತಿ- ಉಜಿರೆಯ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜ್ನ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ, ಕೊಡಗು ವಿರಾಜಪೇಟೆ ಕಾವೇರಿ ಕಾಲೇಜ್ನ ಗ್ರಂಥಪಾಲಕಿ ಡಾ.ಮುತ್ತಮ್ಮ ಎ.ಆರ್. ಸ್ವೀಕರಿಸಿದರು. ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ- ಕಾರ್ಕಳ ಮಂಜುನಾಥ್ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜಯಭಾರತಿ ಎ., ಕೊಡಗು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ರಾಖಿ ಪೂವಣ್ಣ ಎಂ. ಸ್ವೀಕರಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣದವರೆಗೂ ಪ್ರತಿದಿನ ಸವಾಲು ಹೆಚ್ಚುತ್ತಿದೆ. ಮಕ್ಕಳು ಹಾಗೂ ಪಾಲಕರ ಮನೋಧರ್ಮವೂ ಬದಲಾಗುತ್ತಿದೆ. ಸರ್ಕಾರವೊಂದೇ ಶಿಕ್ಷಣದ ಉನ್ನತಿ ಮಾಡಲು ಸಾಧ್ಯವಿಲ್ಲ. ಖಾಸಗಿ ಸಂಸ್ಥೆಗಳ ಅಗತ್ಯತೆಯೂ ಇದೆ. ಅನಿವಾರ್ಯತೆ ನಡುವೆ ವಿದ್ಯಾಕ್ಷೇತ್ರದ ಪಾವಿತ್ರ್ಯ ಉಳಿಸುವ ಕಾರ್ಯವಾಗಬೇಕಿದೆ. ಹಿಂದಿನ ಮೌಲ್ಯಾಧಾರಿತ ಶಿಕ್ಷಣ ಇಂದು ಲಭಿಸದಾಗಿದೆ. ಹೀಗಾಗಿ ಶಿಕ್ಷಕರ ಸಮುದಾಯ ಪಲಾಯನವಾದಿಗಳಾಗಬಾರದು. ಬದಲಾವಣೆಯ ಈ ಕಾಲದಲ್ಲಿ ಸವಕಲು ನಾಣ್ಯವಾಗದೆ, ಚಲಾವಣೆಯ ನಾಣ್ಯವಾಗಿ ಉತ್ತಮ ಶಿಕ್ಷಣ ನೀಡುವುದು ಮುಖ್ಯಗುರಿ ಆಗಬೇಕು.> ಡಾ. ಎಂ.ಮೋಹನ್ ಆಳ್ವ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ.