ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣ ಹಾಗೂ ಬೀಚ್ಗಳಿಗೆ ಡಾ. ರಾಮ್ಪ್ರಸಾತ್ ಮನೋಹರ್ ಭೇಟಿ ನೀಡಿ ಪರಿಶೀಲಿಸಿದರು. ಸೌಮ್ಯಾ ಬಾಪಟ್, ವಿದ್ಯಾವತಿ, ಹೇಮಲತಾ ಹಾಗೂ ಇತರರಿದ್ದರು.
* ಡಾ. ರಾಮ್ಪ್ರಸಾತ್ ಮನೋಹರ್ ಸೂಚನೆ
* ಉಡುಪಿ ಜಿಲ್ಲೆಯ ಪ್ರಮುಖ ತಾಣಗಳಿಗೆ ಭೇಟಿ
ಉಡುಪಿ: ಪರಿಣಾಮಕಾರಿಯಾಗಿ ಉಡುಪಿ ಜಿಲ್ಲೆಯ ಕರಾವಳಿ, ಪ್ರಕೃತಿ ಹಾಗೂ ಜಲ ಪ್ರವಾಸೋದ್ಯಮದ ಸಾಮರ್ಥ್ಯ ಬಳಸಿಕೊಳ್ಳಬೇಕು. ಜತೆಗೆ ಧಾರ್ಮಿಕ ಪ್ರವಾಸೋದ್ಯಮದೊಂದಿಗೆ ಜಿಲ್ಲೆಯಲ್ಲಿರುವ ಇನ್ನಿತರ ಪ್ರವಾಸಿ ತಾಣಗಳನ್ನೂ ವೇಗವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ರಾಮ್ಪ್ರಸಾತ್ ಮನೋಹರ್ (ಐಎಎಸ್) ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ನಿರ್ದೇಶನದಂತೆ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಗುರುವಾರ (ಆ.27) ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಮೂಲಸೌಕರ್ಯ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹೆಚ್ಚು ದಿನಗಳ ಕಾಲ ತಂಗುವಂತೆ ಹೊಸ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಅದಕ್ಕೆ ತಕ್ಕ ಸೌಲಭ್ಯ ಇರಬೇಕು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರನ್ನು ಜಿಲ್ಲೆಯ ಕರಾವಳಿ ಮತ್ತು ನೈಸರ್ಗಿಕ ತಾಣಗಳತ್ತ ಸೆಳೆಯುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದರು.
ಸ್ಥಳೀಯರಿಗೆ ಆರ್ಥಿಕ ಬಲ
ಪ್ರವಾಸಿಗರ ವಾಸ್ತವ್ಯದಿಂದಾಗಿ ಹೋಟೆಲ್, ಸಾರಿಗೆ, ಆಹಾರ, ಪ್ರವಾಸಿ ಸೇವೆಗಳು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ಅದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಮತ್ತು ಉದ್ಯಮ ಅವಕಾಶ ಸೃಷ್ಟಿಸುವುದು ಇಲಾಖೆಯ ಪ್ರಮುಖ ಉದ್ದೇಶವಾಗಬೇಕು. ಉಡುಪಿ ಜಿಲ್ಲೆಯ ಸ್ಥಳೀಯ ಕಲೆ, ಸಂಸ್ಕೃತಿ, ಆಹಾರ ಮತ್ತು ಕರಾವಳಿಯ ವಿಶಿಷ್ಟ ಜೀವನಶೈಲಿಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ (ಕರಾವಳಿ ಪ್ರವಾಸೋದ್ಯಮ) ಸೌಮ್ಯಾ ಬಾಪಟ್, ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ವಿದ್ಯಾವತಿ,ಐಪಿಇ ಗ್ಲೋಬಲ್ ತಂಡದ ಪಿಎಂಯು ಪ್ರತಿನಿಧಿ ಹೇಮಲತಾ, ಡಿಟಿಸಿ ಮತ್ತು ಕೆಟಿಐಎಲ್ನ ಇಂಜಿನಿಯರ್ಗಳು ಇದ್ದರು.
ನೈಸರ್ಗಿಕ ಸೌಂದರ್ಯಕ್ಕೆ ಆಗದಿರಲಿ ಧಕ್ಕೆ
ತ್ರಾಸಿ-ಮರವಂತೆ ಬೀಚ್ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಡಾ. ರಾಮ್ಪ್ರಸಾತ್, ಕಾಮಗಾರಿಗಳಿಗೆ ವೇಗ ನೀಡಿ 2-3 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಸೋಮೇಶ್ವರ ಬೀಚ್ ಮತ್ತು ಕುಂದಾುರದ ಕೋಡಿ ಹಿನ್ನೀರು ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಪೂರಕ ಸೌಕರ್ಯ ಅಭಿವೃದ್ಧಿಪಡಿಸಿ, ತಾಣವನ್ನು ಮತ್ತಷ್ಟು ಆಕರ್ಷಕ ಮಾಡಬೇಕು. ಆದರೆ, ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಹಿನ್ನೀರು ಪ್ರದೇಶದಲ್ಲಿ ಪರಿಸರ ಸ್ನೇಹಿ ಹೌಸ್ಬೋಟ್ ಹಾಗೂ ಜಲ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.