ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ನೇತೃತ್ವದ ವಿಜ್ಞಾನಿಗಳು ಪ್ರಾತ್ಯಕ್ಷಿಕೆ ತೋಟ ವೀಕ್ಷಿಸಿದರು. ಪ್ರಮುಖರಾದ ಮಹೇಶ್ ಪುಚ್ಚಪ್ಪಾಡಿ, ಡಾ.ವಿನಾಯಕ ಹೆಗ್ಡೆ, ಡಾ.ಭವಿಷ್ಯ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ‘ಎಲೆ ಚುಕ್ಕಿ ರೋಗ’ದ ಸಮರ್ಪಕ ನಿರ್ವಹಣೆ ಹಾಗೂ ಸಂಶೋಧನಾ ಕ್ರಮಗಳ ಪರಿಶೀಲನೆಗಾಗಿ, ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ಹಮ್ಮಿಕೊಂಡ ನಿರ್ವಹಣಾ ಕ್ರಮದ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಬಾಲಚಂದ್ರ ಹೆಬ್ಬಾರ್ ಹಾಗೂ ಹಿರಿಯ ವಿಜ್ಞಾನಿಗಳ ತಂಡ ಸೋಮವಾರ ಭೇಟಿ ನೀಡಿತು.
ಕೃಷಿಕರಾದ ಸುಬ್ರಹ್ಮಣ್ಯ ಪ್ರಸಾದ್, ಗಿರೀಶ್ ಗೌಡ ನಡುಗಲ್ಲು, ಕುಮಾರಸ್ವಾಮಿ ಮೇಲ್ತೋಟ, ಚಂದ್ರಶೇಖರ ಭಟ್, ತಿರುಮಲೇಶ್ವರ ಭಟ್ ಚಣಿಲ ಅವರ ಪ್ರಾತ್ಯಕ್ಷಿಕೆ ತೋಟಗಳಿಗೆ ವಿಜ್ಞಾನಿಗಳು ಭೇಟಿ ನೀಡಿದರು.
ತೋಟದಲ್ಲಿ ಅಳವಡಿಸಲಾಗಿರುವ ಹವಾಮಾನ ಮಾಪನ ಯಂತ್ರ ಹಾಗೂ ರೋಗ ಬಾಧಿತ ಮರಗಳಿಗೆ ನೀಡಲಾಗುತ್ತಿರುವ ಸಂಯೋಜಿತ ಚಿಕಿತ್ಸಾ ಕ್ರಮಗಳನ್ನು ಪರಿಶೀಲಿಸಿದರು. ರೈತರೊಂದಿಗೆ ಸಂವಾದ ನಡೆಸಿ, ರೋಗ ನಿಯಂತ್ರಣಕ್ಕೆ ಸಂಶೋಧನಾ ಸಂಸ್ಥೆ ಸಂಪೂರ್ಣ ಸಹಕಾರ ನೀಡುವುದಾಗಿ ವಿಜ್ಞಾನಿಗಳು ಭರವಸೆ ನೀಡಿದರು.
ಕಾಸರಗೋಡು ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ, ವಿಟ್ಲ ಕೇಂದ್ರದ ವಿಜ್ಞಾನಿಗಳಾದ ಡಾ.ಭವಿಷ್ಯ, ಡಾ.ಥವಪ್ರಕಾಶ್ ಪಾಂಡ್ಯ ಹಾಗೂ ಪ್ರಾಜೆಕ್ಟ್ ಸಹಾಯಕರಾದ ಅಖಿಲಾ ಹಾಗೂ ಹಿತಶ್ರೀ, ಕೃಷಿಕರಾದ ರಮೇಶ್ ದೇಲಂಪಾಡಿ, ಅರುಣ್ ಕುಮಾರ್ ಕಾಂಚೋಡು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಇದ್ದರು.
ತೋಟದಲ್ಲಿ ಅಳವಡಿಸಲಾಗಿರುವ ಸೆನ್ಸಾರ್ ಆಧಾರಿತ ತಂತ್ರಜ್ಞಾನಗಳು ರೋಗದ ತೀವ್ರತೆ ಮತ್ತು ಹವಾಮಾನದ ಏರಿಳಿತ ನಡುವಿನ ಸಂಬಂಧ ಅಧ್ಯಯನ ಮಾಡಲು ಸಹಕಾರಿ. ಅಳವಡಿಸಲಾಗಿರುವ ವೆದರ್ ಸ್ಟೇಷನ್ ಮೂಲಕ ಪರಿಸರದ ಹವಾಮಾನ ಏರಿಳಿತ ಹಾಗೂ ಬದಲಾವಣೆ ಅರಿಯಲು ಹಾಗೂ ತೋಟದ ಮೇಲಾಗುವ ಪರಿಣಾಮಗಳ ಅಧ್ಯಯನ ಸಾಧ್ಯವಾಗುತ್ತದೆ.