ಕುಕ್ಕೆಯಲ್ಲಿ ನಿರ್ಮಾಣವಾಗುತ್ತಿರುವ ಗೋಶಾಲೆ.
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವಳದ ನಕ್ಷತ್ರ ವನದಲ್ಲಿ ಗೋಶಾಲೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಬಿಡಾಡಿ ಗೋವುಗಳ ಉಪಟಳದಿಂದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಮುಕ್ತಿ ಸಿಗುವ ಜತೆಗೆ ಗೋವುಗಳಿಗೂ ಆಶ್ರಯ ದೊರಕಲಿದೆ.
ಸುಬ್ರಹ್ಮಣ್ಯ ಪೇಟೆ ದೊಡ್ಡದಿದ್ದು ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುತ್ತಾರೆ. ಬಿಡಾಡಿ ಗೋವುಗಳಿಂದ ಭಕ್ತರು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಬೇರೆ ಬೇರೆ ಊರುಗಳಿಂದ ಬಂದು ಗೋವುಗಳನ್ನು ಬಿಟ್ಟು ಹೋಗುವುದರಿಂದ ಬಿಡಾಡಿ ಗೋವುಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಇದರಿಂದ ಭಕ್ತರಿಗೆ ತೊಂದರೆಯಾಗುವ ಜತೆಗೆ ವಾಹನಗಳ ಅಪಘಾತಕ್ಕೂ ಕಾರಣವಾಗುತ್ತಿತ್ತು.
ನಕ್ಷತ್ರ ವನದಲ್ಲಿ ನಿರ್ಮಾಣ
ಬಿಡಾಡಿ ಗೋವುಗಳಿಂದ ಉಂಟಾಗುತ್ತಿದ್ದ ತೊಂದರೆಗಳು ಸುಬ್ರಹ್ಮಣ್ಯ ಗ್ರಾಪಂ ಮತ್ತು ದೇವಾಲಯದ ಆಡಳಿತಕ್ಕೂ ಬಗೆಹರಿಸಲಾಗದ ಸಮಸ್ಯೆ ಆಗಿ ಪರಿಣಮಿಸಿತ್ತು. ಆದರೀಗ ಕುಕ್ಕೆ ದೇವಳದ ವತಿಯಿಂದ ವಲ್ಲೀಶ ಸಭಾಭವನದ ಎದುರು ಭಾಗದ ನಕ್ಷತ್ರ ವನದಲ್ಲಿ ಈಗಾಗಲೇ 92 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ನಿರ್ಮಿಸುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಾರ್ಪಣೆಯಾಗಲಿದ್ದು ಸಮಸ್ಯೆ ಬಗೆಹರಿಯಲಿದೆ.
150 ರಿಂದ 200 ಜಾನುವಾರುಗಳಿಗೆ ಆಶ್ರಯ
ಸುಬ್ರಹ್ಮಣ್ಯದಲ್ಲಿ ನಿರ್ಮಿಸುತ್ತಿರುವ ಗೋಶಾಲೆ 1.5 ಎಕರೆ ಜಾಗ ಹೊಂದಿರುವ ನಕ್ಷತ್ರ ವನದೊಳಗಿದೆ. ಒಂದು ದೊಡ್ಡ ಹಟ್ಟಿ, ಗೋದಾಮು, ಕುಡಿಯುವ ನೀರಿನ ವ್ಯವಸ್ಥೆಗೆ ಅಲ್ಲಲ್ಲಿ ಸಣ್ಣ ಸಣ್ಣ ಕೊಳ, ಮೇವು ಒದಗಿಸುವ ಶೆಡ್‌ಗಳು ಇರಲಿವೆ. ಗೋವುಗಳು ಸ್ವಚ್ಛಂದವಾಗಿ 1.5 ಎಕರೆಯೊಳಗೆ ಎಲ್ಲೆಂದರಲ್ಲಿ ಓಡಾಡಬಹುದಾಗಿದೆ. ಸುತ್ತಲೂ ತಡೆಬೇಲಿ, ಗೋ ಶಾಲೆ ಸುತ್ತಲೂ ವಾಕಿಂಗ್ ಹೋಗುವವರಿಗೆ ವಾಕಿಂಗ್ ಪಾಥ್ ಇರಲಿದೆ. ಮುಖ್ಯ ರಸ್ತೆಯಿಂದಲೇ ಮೆಟ್ಟಿಲು ನಿರ್ಮಿಸಿ, ಸಾರ್ವಜನಿಕರ ವೀಕ್ಷಣೆಗೂ ವ್ಯವಸ್ಥೆ ಇರಲಿದೆ. 150 ರಿಂದ 200 ಗೋವುಗಳಿಗೆ ಇಲ್ಲಿ ಆಶ್ರಯ ಕಲ್ಪಿಸಲು ಯೋಜಿಸಲಾಗಿದೆ.
ಇದೇ ಊರಿನವನಾಗಿದ್ದು ಇಲ್ಲಿ ಬಿಡಾಡಿ ಗೋವುಗಳಿಂದಾಗುವ ಸಮಸ್ಯೆಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಸಾರ್ವಜನಿಕ ಸ್ಥಳದಲ್ಲಿ ಗೋವನ್ನು ಬಿಟ್ಟು ಹೋಗುವ ಬೇಜಾವಬ್ದಾರಿ ವ್ಯಕ್ತಿಗಳಿಂದ ಇಂಥ ಸ್ಥಿತಿ ಉಂಟಾಗಿದೆ. ನಾವು ಭಾಷಣದಲ್ಲಿ ಮಾತ್ರ ಹೇಳುವುದಿಲ್ಲ. ಸಮಸ್ಯೆ ಪರಿಹರಿಸಲು ಪಯತ್ನಿಸುತ್ತೇವೆ.
— ಹರೀಶ್ ಇಂಜಾಡಿ, ಕುಕ್ಕೆ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ