ಜಿಲ್ಲಾಧಿಕಾರಿ ನೂತನ ವಧು ವರರಿಗೆ ಶುಭ ಹಾರೈಸಿದರು. 
ಉಡುಪಿ

ನಿಟ್ಟೂರು ಸರ್ಕಾರಿ ಮಹಿಳಾ ನಿಲಯದಲ್ಲಿ ಜೋಡಿ ವಿವಾಹ

ಉಡುಪಿ: ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ಇಬ್ಬರು ಅನಾಥ ಹೆಣ್ಣು ಮಕ್ಕಳು ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ. ಜಿಲ್ಲಾಡಳಿತ ನೇತೃತ್ವದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಮುಂದೆನಿಂತು ಕನ್ಯಾದಾನ ಮಾಡಿದ್ದಾರೆ.
ಮೂಲತ: ಬಳ್ಳಾರಿ ಜಿಲ್ಲೆಯ ಮಲ್ಲೇಶ್ವರಿ (22) ತೃತೀಯ ಬಿಎ ವ್ಯಾಸಂಗ ಮಾಡುತ್ತಿದ್ದು, ಮೂಲ್ಕಿ ಬಪ್ಪನಾಡಿನ ಎಂ. ಸಂಜಯ ಪ್ರಭು (31) ಅವರನ್ನು ವರಿಸಿದ್ದಾರೆ. ವರ ಎಂ.ಕಾಂ ಪದವೀಧರರಾಗಿದ್ದು, ಬೆಂಗಳೂರಿನ ಐಬಿಎಂ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಕಿವಿ ಕೇಳಿಸದ, ಮಾತು ಬಾರದ ಅನಾಥ ಯುವತಿ ಸುಶೀಲಾ (42) ಇವರನ್ನು ಹಾಸನದ ಕೃಷಿಕ ನಾಗರಾಜ (45) ಕೈಹಿಡಿದಿದ್ದಾರೆ.

50 ಸಾವಿರ ರೂ. ಠೇವಣಿ
ವಿವಾಹ ನೋಂದಣಿ ಮಾಡಿದ ಬಳಿಕ ಹುಡುಗಿಯರ ಬ್ಯಾಂಕ್​ ಖಾತೆಯಲ್ಲಿ ಸರ್ಕಾರದಿಂದ ತಲಾ 50 ಸಾವಿರ ರೂ. ನಿಖರ ಠೇವಣಿ ಇಡಲಾಗಿದ್ದು, 3 ವರ್ಷದ ಬಳಿಕ ಈ ಹಣವನ್ನು ಮಧು ಬಳಸಿಕೊಳ್ಳಬಹುದು. ಮದುವೆ ಬಳಿಕವೂ ಯುವತಿಯವರು 3 ವರ್ಷದವರೆಗೆ ಮಹಿಳಾ ನಿಲಯದ ಪರಿವೀಕ್ಷಣೆಗೆ ಒಳಪಡಲಿದ್ದಾರೆ. ಈವರೆಗೆ ಒಟ್ಟು 25 ವಿವಾಹ ಕಾರ್ಯ ನಡೆದಿದ್ದು, ಶುಕ್ರವಾರ 26 ಮತ್ತು 27ನೇ ಮದುವೆ ಸಂಭ್ರಮ. ಪ್ರಸ್ತುತ ರಾಜ್ಯ ಮಹಿಳಾ ನಿಲಯದಲ್ಲಿ 51 ಮಹಿಳೆಯರು 2 ಮಕ್ಕಳು ಆಶ್ರಯ ಪಡೆದಿದ್ದು, ನಾಲ್ವರು ಕಾಲೇಜು ವಿದ್ಯಾರ್ಥಿನಿಯರಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ನಿಲಯ ಅಧೀಕ್ಷಕಿ ಪುಷ್ಟಾರಾಣಿ, ಡಿವೈಎಸ್ಪಿ ಡಿ.ಟಿ. ಪ್ರಭು ಉಪಸ್ಥಿತರಿದ್ದರು.