ಬೆಳ್ತಂಗಡಿಯ ಫ್ಲಾೃಟ್‌ನಲ್ಲಿ ವಶಪಡಿಸಿಕೊಂಡಿರುವ ವಸ್ತುಗಳನ್ನು ಪೊಲೀಸರು ಠಾಣೆಗೆ ಸಾಗಿಸಿದರು.
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಕಣಿಯೂರು ಗ್ರಾಮದ ಅಡೆಂಜದಲ್ಲಿ ಖೋಟಾನೋಟು ತಯಾರಿಸುತ್ತಿದ್ದ ಕೇಂದ್ರಕ್ಕೆ ಜು.16ರಂದು ದಾಳಿ ನಡೆಸಿ ಬಂಧಿಸಿದ 7 ಮಂದಿ ಆರೋಪಿಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಸಂದೀಪ ಪುಂಡಲೀಕ ಶೋಳಂಬಿ(30) ಎಂಬಾತ ವಾಸವಿದ್ದ ಬೆಳ್ತಂಗಡಿಯ ಅಪಾರ್ಟ್‌ಮೆಂಟ್‌ಗೆ ಪೊಲೀಸರು ಭಾನುವಾರ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಕೊಠಡಿಯಲ್ಲಿ ಎರಡು ಪ್ರಿಂಟರ್, ಪೈಂಟ್ ಡಬ್ಬ, ಪ್ರಿಂಟ್ ಮಾಡಲು ಉಪಯೋಗಿಸಿದ ಎ-4 ಶೀಟ್ ಪೇಪರ್ ಹಾಗೂ ಕೆಲ ವಸ್ತುಗಳನ್ನು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಇಬ್ರಾಹಿಂ, ಸಲ್ಮಾನ್ ಫಾರೀಸ್, ಶರೀಫ್, ಮಹಮ್ಮದ್ ನಬಾಸ್, ಸಂದೀಪ ಪುಂಡಲೀಕ ಶೋಳಂಬಿ, ಸಿರಾಜುದ್ದೀನ್, ಇರ್ಷಾದ್ ಪೈಕಿ ನಾಲ್ವರನ್ನು ಪೊಲೀಸರು ವಶದಲ್ಲಿರಿಸಿ ತನಿಖೆ ಮುಂದುವರೆಸುತ್ತಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಮತ್ತು ಸಂದೀಪ್ ಪುಂಡಲೀಕ ಶೋಳಂಬಿ ಈ ಮೊದಲು ಬೆಳ್ತಂಗಡಿಯ ಎರಡು ಬಾಡಿಗೆ ಮನೆಯಲ್ಲಿ ಖೋಟಾನೋಟು ಪ್ರಿಂಟ್ ಮಾಡಲು ತಯಾರಿ ನಡೆಸಿದ್ದರು. ಜಾಗ ಹೊಂದಾಣಿಕೆ ಆಗದ ಕಾರಣ ಉಪ್ಪಿನಂಗಡಿಗೆ ಸ್ಥಳಾಂತರಿಸಿದ್ದರು. ಈ ಮಾಹಿತಿಯಂತೆ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ರಸ್ತೆಯಲ್ಲಿರುವ ಬಿ.ಎ.ಅಪಾರ್ಟ್‌ಮೆಂಟ್ ಕಟ್ಟಡದ 14 ಮನೆಗಳ ಪೈಕಿ ಎರಡು ಬಾಡಿಗೆ ಮನೆ ಮೇಲೆ ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿಗಳು ನಕಲಿ ನೋಟನ್ನು ಪುಂಜಾಲಕಟ್ಟೆಯ ಬಾರೊಂದರಲ್ಲಿ ಚಲಾಯಿಸಲು ಯತ್ನಿಸಿರುವ ಬಗ್ಗೆ ಹಾಗೂ ನಕಲಿ ನೋಟು ತಯಾರಿಕೆಗೆ ಕೇರಳ ರಾಜ್ಯದಿಂದ ಕಾಗದ ತರಿಸಲಾಗುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.