ರಾಷ್ಟ್ರಮಟ್ಟದ ಕದಳೀ ವಿಶ್ವದರ್ಶನ ಬಾಳೆ ಮೇಳ ಪೂರ್ವಭಾವಿ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿದರು.  
ಉಡುಪಿ

ಕದಳಿ ವಿಶ್ವದರ್ಶನ ಸಾಂಪ್ರದಾಯಿಕ ಬಾಳೆ ಮುಹೂರ್ತದ ವಿಸ್ತಾರ ರೂಪ: ಸೋದೆ ಶ್ರೀ

ರಾಷ್ಟ್ರಮಟ್ಟದ ಕದಳೀ ವಿಶ್ವದರ್ಶನ ಬಾಳೆ ಮೇಳ ಪೂರ್ವಭಾವಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ

ಉಡುಪಿ: ಪರ್ಯಾಯ ಪೂರ್ವಭಾವಿಯಾಗಿ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದ ಬಾಳೆ ಮುಹೂರ್ತವನ್ನು ಈ ಬಾರಿ ಸ್ವಲ್ಪ ವಿಸ್ತಾರವಾಗಿ ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಕದಳಿ ವಿಶ್ವ ದರ್ಶನ ಎಂಬ ರಾಷ್ಟ್ರಮಟ್ಟದ ಬಾಳೆ ಮೇಳ ಏರ್ಪಡಿಸಲಾಗುತ್ತಿದೆ. ಅನೇಕ ಮಂದಿ ಕೃಷಿಕರು, ಮಠದ ಭಕ್ತರು ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾಡಳಿತ ಸಹಕಾರ ಅಗತ್ಯ ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಸೋದೆ ಮಠದಲ್ಲಿ ಪರ್ಯಾಯದ ಪೂರ್ವಭಾವಿಯಾಗಿ ನ.29ರಿಂದ ಡಿ.1ರವರೆಗೆ ಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ರಾಷ್ಟ್ರಮಟ್ಟದ ಕದಳೀ ವಿಶ್ವದರ್ಶನ ಬಾಳೆ ಮೇಳ ಪೂರ್ವಭಾವಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್​, ಕಾಂಗ್ರೆಸ್​ ಮುಖಂಡ ಪ್ರಸಾದ್​ ರಾಜ್​ ಕಾಂಚನ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​ ಹಾಗೂ ಮಾಜಿ ನಗರಸಭಾ ಸದಸ್ಯ ಗಿರೀಶ್​ ಅಂಚನ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ನಗರಸಭೆ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್​, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಉ. ಕಲ್ಗುಟಕರ್​, ನಗರ ಠಾಣೆಯ ಉಪನಿರೀಕ್ಷಕಭರತೇಶ್​ ಕಂಕಣವಾಡಿ ಹಾಗೂ ಸಂಚಾರ ಠಾಣೆಯ ಉಪನಿರೀಕ್ಷಕ ಮಹೇಶ್​ ಟಿ. ಉಪಸ್ಥಿತರಿದ್ದರು.

ಸಭೆಯಲ್ಲಿ ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತಾ ವ್ಯವಸ್ಥೆ, ಸುಗಮ ಸಂಚಾರ ನಿರ್ವಹಣೆ, ವಾಹನಗಳ ಪಾರ್ಕಿಂಗ್​ ವ್ಯವಸ್ಥೆ, ಆರೋಗ್ಯ ಸೇವೆ, ಅಗ್ನಿಶಾಮಕ ಸುರಕ್ಷತೆ ಸೇರಿದಂತೆ ವಿವಿಧ ಮೂಲಸೌಕರ್ಯ ಒದಗಿಸುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.

ನ. 29ರಂದು ಬೆಳಗ್ಗೆ 7:45ಕ್ಕೆ ರಥಬೀದಿಯಲ್ಲಿರುವ ಸೋದೆ ಶ್ರೀ ವಾದಿರಾಜ ಮಠದಲ್ಲಿ ಬಾಳೆ ಮುಹೂರ್ತ ನೆರವೇರಲಿದೆ. ಬೆಳಿಗ್ಗೆ 9:30ಕ್ಕೆ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ಕದಳೀ ವಿಶ್ವದರ್ಶನ ಬಾಳೆ ಮೇಳ ಉದ್ಘಾಟನೆ ನಡೆಯಲಿದ್ದು, ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.