ದೆಹಲಿಯ ಶಿವನಾಡರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನನ್ಯ ಮುಖರ್ಜಿ ಮುಖ್ಯ ಅತಿಥಿಯಾಗಿದ್ದರು
ಉಡುಪಿ: ವಿದ್ಯಾರ್ಥಿಗಳು ಶಿಕ್ಷಣವನ್ನು ಸಹಾನುಭೂತಿ, ವಿವೇಕ ಮತ್ತು ನೈತಿಕ ತಿಳುವಳಿಕೆಯೊಂದಿಗೆ ಬಳಸಬೇಕು. ಕೃತಕ ಬುದ್ಧಿಮತ್ತೆಯಿಂದ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಾಗಿದೆ. ಎಐ ತಂತ್ರಜ್ಞಾನವನ್ನು ವಿಶ್ಲೇಷಣೆ ಮತ್ತು ದತ್ತಾಂಶ ಸಂಗ್ರಹಕ್ಕೆ ಮಾತ್ರ ಬಳಸಬೇಕು. ಆದರೆ ಅಂತಿಮ ನಿರ್ಧಾರವನ್ನು ಮನುಷ್ಯನೇ ಕೈಗೊಳ್ಳಬೇಕು. ಹೀಗಾಗಿ ತಂತ್ರಜ್ಞನ ನಿರ್ಧಾರವೇ ಮೇಲಗೈ ಸಾಧಿಸುತ್ತದೆ ಎಂದು ದೆಹಲಿಯ ಶಿವನಾಡರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನನ್ಯ ಮುಖರ್ಜಿ ಹೇಳಿದರು.
ಶುಕ್ರವಾರ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) 33ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಟಿಕೋತ್ಸವಕ್ಕೆ ಚಾಲನೆ ನೀಡಿದರು.
ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್ ಮಾತನಾಡಿದರು. ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಹೊರತಂದಿರುವ ಅಂಚೆ ಲಕೋಟೆಯನ್ನು ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಪೈ ಮತ್ತು ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಬಿಡುಗಡೆ ಮಾಡಿದರು.
ಪೊನ್ನಮ್ಮ ಎಂ.ಎಂ., ನಿಕಿತಾ ಮರೀನಾ ಸಲ್ದಾನ , ಸಿರಿಲ್ ಬಿಜಿ ಮತ್ತು ವಿಂಧ್ಯ ಎಸ್. ಬಾದಲ್ ಅವರಿಗೆ ಅತ್ಯುತ್ತಮ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ 2025 ನೀಡಿ ಗೌರವಿಸಲಾಯಿತು.