ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿದರು. 
ಉಡುಪಿ

ಶಿಕ್ಷಣದಿಂದ ಮಹಿಳೆಯರ ಸಬಲೀಕರಣ

ಗೋಪಾಲಕೃಷ್ಣ ಪಾದೂರ್
ಉಡುಪಿ: ಶಿಕ್ಷಣ ಜೀವನ ಬದಲಾಯಿಸುವ ದೊಡ್ಡ ಅಸ್ತ್ರ, ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನಾಯಕತ್ವ ಗುಣವನ್ನು ನೀಡುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಅಜ್ಜರಕಾಡು ಪುರಭವನದಲ್ಲಿ ಡಾ. ಜಿ. ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಒಳ್ಳೆಯ ಹುಡುಗಿ ಎನಿಸಿಕೊಳ್ಳುವುದಕ್ಕಿಂತ ಧೈರ್ಯವಂತೆಯಾಗುವುದು ತುಂಬಾ ಮುಖ್ಯ. ಇದರಿಂದ ಮಾತ್ರ ಶೋಷಣೆಯನ್ನು ಪ್ರತಿಭಟಿಸಲು ಸಾಧ್ಯ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಅನೇಕ ವಿಧಗಳಲ್ಲಿ ವಂಚನೆ ನಡೆಯುತ್ತಿದ್ದು, ಈ ಬಗ್ಗೆ ಯುವತಿಯರು ಎಚ್ಚರವಹಿಸಬೇಕು ಎಂದರು.

ತಾಯಿ ಗುಣ ಪ್ರತಿ ಹೆಣ್ಣಿನಲ್ಲಿ ಅಂತರ್ಗತವಾಗಿರುತ್ತದೆ. ಇದಕ್ಕೆ ಪ್ರೋತ್ಸಾಹ ಸಿಗಬೇಕು. ಮಹಿಳೆ ಸಮಾಜಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.

ಸಭೆಯಲ್ಲಿ ಪ್ರಾಂಶುಪಾಲ ಸೋಜನ್​ ಕೆ.ಜಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನುರಾಧಾ ಹಾದಿಮನಿ ಉಪಸ್ಥಿತರಿದ್ದರು. ಡಾ. ನಿಕೇತನ ಸ್ವಾಗತಿಸಿ, ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.
"

ಎಚ್​ಪಿವಿ ವ್ಯಾಕ್ಸಿನ್​ ನೀಡಲು ಸೂಚನೆ
ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೆ ಎಚ್​ಪಿವಿ ವ್ಯಾಕ್ಸಿನ್​ ನೀಡಬೇಕು. ಇದರಿಂದ ಗರ್ಭಕಂಠ ಕ್ಯಾನ್ಸರ್​ ತಡೆಗಟ್ಟಲು ಸಾಧ್ಯ. ಹೀಗಾಗಿ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ 15 ದಿನದೊಳಗೆ ವ್ಯಾಕ್ಸಿನ್​ ನೀಡಿ ಈ ಬಗ್ಗೆ ವರದಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸಬೇಕು.

— ಡಾ. ನಾಗಲಕ್ಷ್ಮಿ ಚೌಧರಿ, ಮಹಿಳಾ ಆಯೋಗದ ಅಧ್ಯಕ್ಷೆ