ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಡಾ.ದಿನಕರ ಶೆಟ್ಟಿ ಮಾತನಾಡಿದರು.  
ಉಡುಪಿ

ಎಲ್​ನಿನೋ ಪ್ರಭಾವದಿಂದ ಅಂತರ್ಜಲಮಟ್ಟ ಕುಸಿತ: ಭೂವಿಜ್ಞಾನಿ ದಿನಕರ ಶೆಟ್ಟಿ

ಗೋಪಾಲಕೃಷ್ಣ ಪಾದೂರ್
ಉಡುಪಿ: ಫೆಸಿಪಿಕ್​ನ ಮಧ್ಯ ಮತ್ತು ಪೂರ್ವಭಾಗದಲ್ಲಿ ಉಂಟಾಗುವ ಎಲ್​ನಿನೋ 1950ರಿಂದ 2025ರವರೆಗೆ 22 ಬಾರಿ ಸಂಭವಿಸಿದೆ. ನಾಲ್ಕು ಬಾರಿ ಪ್ರಬಲವಾಗಿ ಸಾಕಷ್ಟು ದುಷ್ಪರಿಣಾಮ ಉಂಟು ಮಾಡಿದೆ. ಇದರಿಂದ ವಿಶ್ವದ ಕೆಲವು ಭಾಗದಲ್ಲಿ ಮಳೆ ಕಡಿಮೆ ಆಗಬಹುದು. ಇದರಿಂದ ಅಂತಜರ್ಲ ಮಟ್ಟ ಕಡಿಮೆಯಾಗುತ್ತದೆ ಎಂದು ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಡಾ.ದಿನಕರ ಶೆಟ್ಟಿ ಹೇಳಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಆಶ್ರಯದಲ್ಲಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಶುಕ್ರವಾರ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿಯಲ್ಲಿ ಈ ಬಾರಿ ಮಳೆಯ ಕೊರತೆ ಆಗಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಅಂತರ್ಜಲ ಮಟ್ಟವು ಒಂದೂವರೆ ಮೀಟರ್​ನಷ್ಟು ಕಡಿಮೆಯಾಗಿದೆ. ನೀರು ನಮಗೆ ಪ್ರಕೃತಿ ಕೊಟ್ಟ ವರ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದ್ದು, ಇದರಲ್ಲಿ ಶೇ.97 ಉಪ್ಪು ನೀರು, ಕೇವಲ ಶೇ.3ರಷ್ಟು ಮಾತ್ರ ಸಿಹಿ ನೀರು ಇದೆ. ಸಿಹಿ ನೀರಿನಲ್ಲಿ ಶೇ. 2ರಷ್ಟು ನೀರು ಮಂಜುಗಡ್ಡೆ ರೂಪದಲ್ಲಿದ್ದರೆ ಕೇವಲ ಶೇ.1ರಷ್ಟು ನೀರು ಮಾತ್ರ ಅಂರ್ಜಲ, ಕೆರೆ, ಸರೋವರದಿಂದ ಪಡೆಯಲಾಗುತ್ತಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿರುವ ನೀರನ್ನು ಕೂಡ ನಾವು ಕುಡಿಯಲು, ಕೃಷಿ, ಕೈಗಾರಿಕೆಗಳಿಗೆ ಅವೈಜ್ಞಾನಿಕವಾಗಿ ಮನಬಂದಂತೆ ಬಳಸುತ್ತಿದ್ದೇವೆ. ಇದರ ಪರಿಣಾಮ 4500 ಮಿ.ಮೀ. ಮಳೆ ಬೀಳುವ ಕರಾವಳಿಯಲ್ಲೂ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.
ಕರಾವಳಿ ಪರಿಸರದಲ್ಲಿ ವಾಡಿಕೆ ಮಳೆ 4500 ಮಿ.ಮೀ. ಆಗಿರುತ್ತದೆ. ಕಳೆದ ವರ್ಷ ವಾಡಿಕೆ ಮಳೆಗಿಂತ 900 ಮಿ.ಮೀ. ಮಳೆ ಜಾಸ್ತಿ ಬಿದ್ದಿದೆ. ಆದರೆ ಇಲ್ಲಿನ ಭೌಗೋಳಿಕ ಲಕ್ಷಣಕ್ಕೆ ಮಳೆಯ ತೀವ್ರತೆಗಿಂತ ಮಳೆಯ ಅವಧಿ ಜಾಸ್ತಿಯಾಗಬೇಕಾಗಿದೆ ಎಂದು ಅವರು ತಿಳಿಸಿದರು.
ನಾವು ನೀರನ್ನು ಮಿತವಾಗಿ ಬಳಸಬೇಕು ಮತ್ತು ಅದರ ಮರು ಬಳಕೆ ಮಾಡಬೇಕು. ಸೃಷ್ಠಿಸಲಾರದ ನೈಸರ್ಗಿಕ ಸಂಪತ್ತು ನೀರಿನ ಮರುಪೂರಣ ಅತೀ ಅಗತ್ಯವಾಗಿದೆ. ಮುಖ್ಯವಾಗಿ ನೀರಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್​ ಶೆಟ್ಟಿ ಉಪಸ್ಥಿತರಿದ್ದರು.
ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್​ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.