ಆಡಳಿತಾಧಿಕಾರಿ ಡಾ.ರವಿಕುಮಾರ್ ಅಧ್ಯಕ್ಷತೆಯಲ್ಲಿ ಕಲ್ಮಂಜ ಗ್ರಾಮ ಪಂಚಾಯಿತಿಯ ಗ್ರಾಮಸಭೆ ನಡೆಯಿತು. ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೋ, ಪಿಡಿಒ ಗೀತಾ ಆರ್.ಸಾಲಿಯಾನ್ ಮೊದಲಾದವರಿದ್ದರು. 
ಉಡುಪಿ

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ

ಇಂದಿರಾ ಎನ್ ಕೆ

ಬೆಳ್ತಂಗಡಿ: ಗ್ರಾಮದ ಹೆದ್ದಾರಿ ರಸ್ತೆ, ಶಾಲಾ ವಠಾರ ಹಾಗೂ ಇನ್ನಿತರ ಕಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂಬ ಆಗ್ರಹ ಕಲ್ಮಂಜ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.

ಆಡಳಿತಾಧಿಕಾರಿ ಡಾ.ರವಿಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮಸಭೆ ನಡೆಯಿತು. ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೋ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು ಅಗತ್ಯ ಕೆಲಸಗಳು ನಡೆಯದಿದ್ದಲ್ಲಿ ಮುಂದಿನ ಬಾರಿ ಗ್ರಾಮಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಗ್ರಾಮಸ್ಥರು, ಕೆಲವು ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದ್ದರೂ ಇನ್ನೂ ತೆರವುಗೊಳಿಸಿಲ್ಲ ಎಂದು ದೂರಿದರು. ವಿದ್ಯುತ್ ಲೈನ್ ಹಾದು ಹೋಗುವ ಮಾರ್ಗದಲ್ಲಿನ ಮರಗಳ ಗೆಲ್ಲು ತೆರವು ಮಾಡಬೇಕು, ಹಳೇ ತಂತಿ ಬದಲಾಯಿಸಬೇಕು ಎಂದು ಗ್ರಾಮಸ್ಥರು ಮೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದರು.
ಶಾಲಾ ಮಕ್ಕಳು ಹೆದ್ದಾರಿ ರಸ್ತೆಯನ್ನು ಸುರಕ್ಷಿತವಾಗಿ ದಾಟಲು ಶಾಲಾ ಅವಧಿಯಲ್ಲಿ ಬ್ಯಾರಿಕೇಡ್ ಇರಿಸಬೇಕು. ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಚರಂಡಿ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕು. ಗ್ರಾಮದ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪಿಡಿಒ ಗೀತಾ ಆರ್.ಸಾಲಿಯಾನ್ ಸ್ವಾಗತಿಸಿದರು.

ಅಂಗಿ ಧರಿಸದೆ ಬಂದು ಪ್ರತಿಭಟನೆ

ಗ್ರಾಮದ ಕಂದೂರುಬೈಲು ರಸ್ತೆ ಅಭಿವೃದ್ಧಿ ಹಲವಾರು ದಶಕಗಳ ಬೇಡಿಕೆಯಾಗಿದ್ದು ಇಲ್ಲಿ ಯಾವೊಂದು ಕೆಲಸಗಳು ನಡೆಯದೆ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗಿದೆ. ಬಾಡಿಗೆ ವಾಹನದವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥ, ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅಂಗಿ ಧರಿಸದೆ ಗ್ರಾಮ ಸಭೆಗೆ ಹಾಜರಾಗಿ ಪ್ರಶ್ನೆಗಳ ಸುರಿಮಳೆಗೈದರು.