ಉಡುಪಿಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಡಾ.ತಿಪ್ಪೇಸ್ವಾಮಿ ಸಭೆ ನಡೆಸಿದರು. ಕಮಲ್​ ಷಾ ಅಲ್ತಾಫ್​ ಅಹಮ್ಮದ್​, ಅಮೃತಾ, ನಾಗರತ್ನಾ ನಾಯಕ್​ ಇತರರಿದ್ದರು. 
ಉಡುಪಿ

ಬಾಲ ಕಾರ್ಮಿಕ ಪದ್ಧತಿ ನಿಯಂತ್ರಿಸಿ

* ಅಧಿಕಾರಿಗಳಿಗೆ ಡಾ. ತಿಪ್ಪೇಸ್ವಾಮಿ ಸೂಚನೆ

* ಡಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಟಾಸ್ಕ್​ ಫೋರ್ಸ್​ ಸಮಿತಿ ಸಭೆ ನಡೆಸಬೇಕು. ವಾರದೊಳಗೆ ಸಂಬಂಧಪಟ್ಟ ಇಲಾಖೆಗಳಿಗೆ ಸಭೆಗಳ ವರದಿ ನೀಡಬೇಕು. ತಿಂಗಳಲ್ಲಿ ಒಂದು ದಿನ ಮಕ್ಕಳಿಗಾಗಿ ಮೀಸಲಿಡಬೇಕು. ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಕೈಗೊಂಡ ಕ್ರಮಗಳನ್ನೂ ಆಯೋಗಕ್ಕೆ ಸಲ್ಲಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ (ಡಿ.23) ಆಯೋಜಿಸಿದ್ದ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ 1986ರ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

9 ಪ್ರಕರಣಗಳಲ್ಲಿ ಶಿಕ್ಷೆ

ಜಿಲ್ಲೆಯಲ್ಲಿ 2025ರ ಏಪ್ರಿಲ್​ವರೆಗೆ ಒಟ್ಟು 660 ಕಡೆಗಳಲ್ಲಿ ತಪಾಸಣೆ ನಡೆಸಿ 1 ಬಾಲ ಕಾರ್ಮಿಕ, 3 ಕಿಶೋರ ಕಾರ್ಮಿಕ ಸೇರಿ ಒಟ್ಟು 4 ಪ್ರಕರಣ ಪತ್ತೆ ಮಾಡಲಾಗಿದೆ. ನ್ಯಾಯಾಲಯದಲ್ಲಿ 5 ಮೊಕದ್ದಮೆ  ಹೂಡಲಾಗಿದ್ದು, 3 ಪ್ರಕರಣಗಳಲ್ಲಿ 32 ಸಾವಿರ ರೂ. ದಂಡ ಮತ್ತು 20 ಸಾವಿರ ರೂ. ಕಾರ್ಪಸ್​ ನಿಧಿ ವಸೂಲು ಮಾಡಲಾಗಿದೆ. ಕಳೆದ ಮೂರು ವರ್ಷದಲ್ಲಿ ಒಟ್ಟು 9 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ ಎಂದರು.

ಮಕ್ಕಳನ್ನು ಶಾಲೆಗೆ ಸೇರಿಸಿ

ರಕ್ಷಿಸಲಾದ ಬಾಲ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದೇ ಆಗಿದೆ. ಮಕ್ಕಳ ನಾಪತ್ತೆ ಪ್ರಕರಣಗಳನ್ನು ಶಿಕ್ಷಣ ಮತ್ತು ಕಾರ್ಮಿಕ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದರು. ಜಿಲ್ಲೆಯ 155 ಗ್ರಾಮ ಪಂಚಾಯಿತಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿಮುಕ್ತ ಗ್ರಾಮ ಗುರುತಿಸಿ, ಪ್ರಮಾಣ ಪತ್ರ ನೀಡಬೇಕು ಎಂದರು. ವಲಸೆ ಕಾರ್ಮಿಕರ ಮಕ್ಕಳಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್​ ಷಾ ಅಲ್ತಾಫ್​ ಅಹಮ್ಮದ್​, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕಿ ಅಮೃತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ್​, ತಾಲೂಕು ಮಟ್ಟದ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.
"

ಕಾರ್ಮಿಕ ಅಧಿಕಾರಿಗಳು ಕೇವಲ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುವುದನ್ನೇ ಗುರಿ ಮಾಡಿಕೊಳ್ಳಬಾರದು. ಬಾಲ ಕಾರ್ಮಿಕರ ಕುಟುಂಬದ ಆರ್ಥಿಕ ಪರಿಸ್ಥಿತಿ ಅವಲೋಕಿಸಬೇಕು. ಸದೃಢ ಕುಟುಂಬಗಳಲ್ಲಿ ಮಾತ್ರ ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡಲು ಸಾಧ್ಯ. ಸಮಸ್ಯಾತ್ಮಕ ಕುಟುಂಬಗಳ ಸಮಗ್ರ ಪುನರ್ವಸತಿಗೆ ಆದ್ಯತೆ ನೀಡಿ ಅವರ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ಉಡುಪಿ ಜಿಲ್ಲೆ ಮಾದರಿಯಾಗಬೇಕು.