ಕೆನರಾ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿಗಳ ‘ಕೆಸರ್ಡ್ ಒಂಜಿ ದಿನ’ ನಡೆಯಿತು.
ಗುರುಪುರ: ಕೃಷಿ ಬಗ್ಗೆ ಯುವ ಪೀಳಿಗೆಯವರಲ್ಲಿ ಅರಿವು ಮೂಡಿಸಬೇಕು. ಯಾವುದೇ ಉದ್ಯೋಗದಲ್ಲಿರಲಿ ಪ್ರತಿಯೊಬ್ಬರಲ್ಲಿ ಕೃಷಿ ಕುರಿತು ಕಿಂಚಿತ್ತಾದರೂ ಒಲವು ಇರಬೇಕು. ಕೆಸರು ಗದ್ದೆಯಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ ಹೇಳಿದರು.
ಕೃಷಿ ಇಲಾಖೆ ಮಂಗಳೂರು, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ವಾಮಂಜೂರು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನದ ಎದುರು ಆಯೋಜಿಸಲಾದ ‘ಕಿಸಾನ್ ಗೋಷ್ಠಿ’ ಮತ್ತು ‘ಕೆಸರ್‌ಡೊಂಜಿ ದಿನ’ ಕಾರ್ಯಕ್ರಮದ 4ನೇ ಹಾಗೂ ಕೊನೆಯ ದಿನವಾದ ಮಂಗಳವಾರ ಮಂಗಳೂರಿನ ಕೆನರಾ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿಗಳ ‘ಕೆಸರ್ಡ್ ಒಂಜಿ ದಿನ’ ಉದ್ಘಾಟಿಸಿ ಮಾತನಾಡಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಖಜಾಂಚಿ ಹಾಗೂ ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಚಾಲಕ ಡಾ.ಸಿಎ ಎಂ.ವಾಮನ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ವಿಕಾಸ್ ಪಿಯು ಕಾಲೇಜು ಪ್ರಾಂಶುಪಾಲೆ ಐಶ್ವರ್ಯಾ ಕೆ, ಕೆನರಾ ಪಿಜಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ನಿತಿನ್‌ಚಂದ್ರ ಕಿಣಿ, ಕೆನರಾ ವಿಕಾಸ್ ಪಿಯು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ.ಉಲ್ಲಾಸ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶೋಭಾ ಪಿ. ಸ್ವಾಗತಿಸಿದರು. ಶೋಭಾ ಪಿ, ತನುಜಾ ಎಸ್, ಶ್ರುತಿ ಬಿ. ಎಸ್ ಮತ್ತು ಕಾವ್ಯಾ ನಿರೂಪಿಸಿದರು. ಉಪನ್ಯಾಸಕಿ ತನುಜಾ ಎಸ್., ವಂದಿಸಿದರು.