ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಅಸಹಾಯಕರಿಗೆ ಸಹಾಯ ಮಾಡುವ ಸೇವೆಗೆ ಧರ್ಮಪ್ರಾಂತ್ಯ ಹಾಗೂ ಎಂಡಿಎಸ್​ ಚಾರೀಟಿಸ್​ ನಡುವೆ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಹಾಗೂ ಮೈಕಲ್​ ಡಿಸೋಜಾ ಒಪ್ಪಂದ ಮಾಡಿಕೊಂಡರು. ಡೆನಿಸ್​ ಡೆಸಾ, ಫ್ರಾನ್ಸಿಸ್​ ಎಫ್​. ಲೂವಿಸ್​, ಸ್ಟೀವನ್​ ಡಿಸೋಜಾ, ಡಾ. ರೋಶನ್​ ಡಿಸೋಜಾ, ರೆಜಿನಾಲ್ಡ್​ ಪಿಂಟೊ, ವಿಲ್ಸನ್​ ಡಿಸೋಜಾ, ಚಾರ್ಲ್ಸ್​ ಮಿನೇಜಸ್​, ಶುಭಾ ರೊಡ್ರಿಗಸ್​ ಇತರರಿದ್ದರು. Picasa
ಉಡುಪಿ

ಬಡವರು, ಅಸಹಾಯಕರ ಸೇವೆ ನಿರಂತರ

* ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಮಾಹಿತಿ

* ಉಡುಪಿ ಧರ್ಮಪ್ರಾಂತ್ಯ, ಎಂಡಿಎಸ್​ ಚಾರೀಟಿಸ್​ ನಡುವೆ ಒಪ್ಪಂದ

ಉಡುಪಿ: ಬಡವರು ಮತ್ತು ಅಶಕ್ತರ ಕಣ್ಣೀರು ಒರೆಸುವ ಕಾಯಕದಲ್ಲಿ ಉಡುಪಿ ಧರ್ಮಪ್ರಾಂತ್ಯವು 15 ವರ್ಷದಿಂದ ನಿರಂತರ ಸೇವೆ ನೀಡುತ್ತಿದೆ. ಇದೀಗ ಈ ಕಾಯಕಕ್ಕೆ ಉದ್ಯಮಿ ಮೈಕಲ್​ ಡಿಸೋಜಾ ಅವರು ಧರ್ಮಪ್ರಾಂತ್ಯದೊಂದಿಗೆ ಕೈಜೋಡಿಸಿದ್ದು, ಮತ್ತಷ್ಟು ಜನರಿಗೆ ಸೇವೆ ನೀಡಬಹುದಾಗಿದೆ. ಬಡ ಕುಟುಂಬಗಳ ನೋವಿಗೆ ಸ್ಪಂದಿಸಿ ಸಹಾಯ ಹಸ್ತ ಚಾಚುವ ಕೆಲಸ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿದೆ ಎಂದು ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ತಿಳಿಸಿದರು.

ಉಡುಪಿಯ ತಮ್ಮ ನಿವಾಸದಲ್ಲಿ ಮೈಕಲ್​ ಡಿಸೋಜಾ ಚಾರಿಟೀಸ್​ ಮುಖ್ಯಸ್ಥ ಮೈಕಲ್​ ಡಿಸೋಜಾ ಅವರೊಂದಿಗೆ ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ನಡುವೆ ಬಡವರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಮುಂದಿನ ಐದು ವರ್ಷಕ್ಕೆ ಅಧಿಕೃತ ಒಪ್ಪಂದಕ್ಕೆ ಗುರುವಾರ (ನ.26) ಸಹಿ ಹಾಕಿ ಮಾತನಾಡಿದರು.

ಶಿಕ್ಷಣ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಎಂಡಿಎಸ್​ ಚಾರಿಟೀಸ್​ ಮೂಲಕ 13 ಕೋಟಿ ರೂಪಾಯಿಗೂ ಅಧಿಕ ಮೊತ್ತ ವ್ಯಯಿಸಲಾಗಿದೆ. ಸಮುದಾಯದ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸಿ, ಅವರಿಗೆ ಜೀವನದಲ್ಲಿ ಯಶಸ್ಸು ಕಾಣಲು ಈ ಸೇವಾ ಕಾರ್ಯ ಸಹಕಾರ ನೀಡಿದಂತಾಗುತ್ತದೆ ಎಂದರು.

ಎಂಡಿಎಸ್​ ಚಾರಿಟೀಸ್​ ಮುಖ್ಯಸ್ಥ ಮೈಕಲ್​ ಡಿಸೋಜಾ ಮಾತನಾಡಿ, ಹೆತ್ತ ತಾಯಿ ಹಾಗೂ ಹುಟ್ಟಿದ ಊರು, ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್​ ಮೂಲಕ ಸಮುದಾಯದ ಅಶಕ್ತರನ್ನು ಮೇಲೆತ್ತುವ ಕಾಯಕ ಮಾಡುತ್ತಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಮಾಧಾನ, ನೆಮ್ಮದಿ ತಂದಿದೆ ಎಂದರು.

ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್​ ಡೆಸಾ ಕಳೆದ 15 ವರ್ಷದಲ್ಲಿ ಕೈಗೊಂಡ ಎಡ್ಯುಕೇರ್​ ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಅನುದಾನ, ಮೂರನೇ ಮಗುವಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಲಭಿಸಿದ ವಿವಿಧ ಅನುದಾನಗಳ ಸಚಿತ್ರ ಮಾಹಿತಿ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಫ್ರಾನ್ಸಿಸ್​ ಎಫ್​. ಲೂವಿಸ್​, ಕುಲಪತಿ ಸ್ಟೀವನ್​ ಡಿಸೋಜಾ, ಜುಡೀಶಿಯಲ್​ ವಿಕಾರ್​ ಡಾ. ರೋಶನ್​ ಡಿಸೋಜಾ, ಸಂಪದ ನಿರ್ದೇಶಕ ರೆಜಿನಾಲ್ಡ್​ ಪಿಂಟೊ, ಸೆನೆಟ್​ ಸಭೆಯ ಸಹಕಾರ್ಯದರ್ಶಿ ವಿಲ್ಸನ್​ ಡಿಸೋಜಾ, ಶಿರ್ವ ವಲಯ ಪ್ರಧಾನ ಗುರು ಚಾರ್ಲ್ಸ್​ ಮಿನೇಜಸ್​, ಎಂಡಿಎಸ್​ ಚಾರಿಟೀಸ್​ನ ಫ್ಲೇವಿ ಡಿಸೋಜಾ, ಲೈನಲ್​ ಆರಾನ್ಹಾ, ಓಸ್ವಲ್ಡ್​ ರೊಡ್ರಿಗಸ್​, ಶುಭಾ ರೊಡ್ರಿಗಸ್​ ಉಪಸ್ಥಿತರಿದ್ದರು.